ಹಕ್ಕಿಯ ಬಲೆ

September 28, 2011

ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ
ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ

ಸಂಜೆಯಾಗಲು ಬಲೆ ಬದಿಗಿರಿಸಿ
ಕುಳಿತೆ ಸುಮ್ಮನೆ ಧ್ಯಾನಿಸಿ
ಕೈ ಎತ್ತಿ ಕರೆದೆ ಹಕ್ಕಿಯ
ಬಂತು ಹೊರಗದು ಧಾವಿಸಿ

ಬೊಗಸೆ ಕೈಯೊಳು ಹಿಡಿದು ಮುತ್ತಿಕ್ಕಿ
ಹಾರಿ ಬಿಟ್ಟೆ ಬಾನಿಗೆ
ಆತನಿಗೆ ಆಗಾದ ಖುಷಿಯನು
ಯಾರಿಗೆ ಹೇಳಲಿ ? ಹೇಗೆ ?

ಬದಿಗೆ ಇರಿಸಿದ ಬಲೆಯು ಏತಕೋ
ಹುಳಿ ಹುಳಿ ಮುಖ ಮಾಡಿತು
ಬಾನ ಸೇರಿದ ಪುಟ್ಟ ಹಕ್ಕಿಯ
ಪಿಳಿ ಪಿಳಿ ತುಸು ನೋಡಿತು

ಪೂರ್ಣವಿರಾಮ.

September 28, 2011

ಪರಕೀಯರು ವಿಭಜಿಸಿದ ಸುಸಂಸ್ಕೃತ ದೇಶಗಳು
ದ್ವೇಷದ ದೀಪಗಳಾದವು ಧಗ ಧಗ ಉರಿದು

ಹಿಡಿಯ ಬಯಸಿದಾಗ ಬಿಳಿಪಾರಿವಾಳವನು
ಕಪಟ ದೇಶವು ಸಾರಿತು ಅಘೋಷಿತ ಕದನವನು

ತಮ್ಮದಲ್ಲದ ಭುವಿಯೊಡೆತನಕೆ
ಭಾಡಗಿ ಸೈನ್ಯವ ತಂದಿತು
ರಕ್ತದ ಕಾಲುವೆ ಹರಿಸಿದರೂ
ಒಂದಿಂಚನೂ ಪಡೆಯದಾಯಿತು

ಅಚಲವಾದ ಆಟಲನ ಸೈನ್ಯವು
ನವಾಜನ ಆವಾಜ್ ಮುಚ್ಚಿಸಿತು
ಜಗವು ಬಯಸಿದ ಶಾಂತಿವಾಕ್ಯಕೆ
ನೀಡಿತು ಕದನವು ಪೂರ್ಣವಿರಾಮ.

ಶತ್ರುವಿಗೆ ಖಾರವಾಗುಳಿಯಿತು ಕಾರ್ಗಿಲ್
ಏನೇ ಆದರೂ ಬಿಟ್ಟು ಕೊಡೆವು ಕಾಶ್ಮೀರ್..

ಕಿಟಕಿಯಲ್ಲಿ ಮಳೆ

September 28, 2011

ಮಟ ಮಟ ಮಧ್ಯಾಹ್ನದೊಳು
ತಪನನ ತಾಪವು ತುಂಬಿರಲು
ಉದಯವಾಯಿತಾಗ ಕಾರ್ಮೋಡ ಸಾಮ್ರಾಜ್ಯ
ಗುಡು ಗುಡು ಎಂದು ಎದೆ ನಡುಗಿಸುತ
ಪ್ರಕಾಶಮಾನವಾದ ಬೆಳಕನು ಫಕ್ಕನೆ ಬೀರುತ
ಎತ್ತಿ ಒಗೆಯುವ ವೇಗದಿ ಬರುತಿರುವ
ಮಾರುತದ ಎದುರು ಕುಬ್ಜನಾದ ಆ ರವಿ

ಒಮ್ಮೆಲೇ ತಲೆ ಸೀಳುವ ಹನಿಗಳೊಡನೆ
ಧರೆಗೆ ದಂಡೆತ್ತಿ ಬಂದ ಮಳೆರಾಯ
ನಡು ನಡುವೆ ಘರ್ಜಿಸುತ ತಲೆ ಎತ್ತಿ ನಿಂತ
ಹೆಮ್ಮರಗಳ ಶಿರ ಬುಡ ಮಾಡುತ್ತ
ಮನ ಮನಗಳ ರಂಜಿಸಿ
ಕೆರೆ ಕಂದಕಗಳ ತಣಿಸಿ
ಚರಂಡಿಗಳ ಬರಿದಾದ ಒಡಲವ
ತುಂಬಿ ತುಳುಕಾಡಿಸಿದ

ಎಲ್ಲವನ್ನೂ ಅಲಕ್ಷಿಸುತ್ತ ಭೂಮಿಯನ್ನಾಳಿದ
ಮಾನವ ಕುಳಿತಿದ್ದ ಮನೆಯ ಮೂಲೆಯಲ್ಲಿ ತೆಪ್ಪಗೆ..

೧೦-೮-೨೦೦೧ ರ ವಿಜಯ ಕರ್ನಾಟಕದಲ್ಲಿ ಸಹ ಪ್ರಕಟ

ನೀನೇ ಹೇಳಿ ನೋಡೊಮ್ಮೆ..

September 28, 2011

ನಿನ್ನ ಕಣ್ತಪ್ಪಿಸಿ ನೋಡುತಿರುವ ಆ ಕಂಗಳು
ನಿನ್ನಿಂದಲೇ ನಾಚಿ ಬಿದ್ದಿಹ ಗಲ್ಲದ ಗುಳಿಯು
ಅರಿಯದೇ ಮೂಡಿಹ ಆ ಮುಗುಳ್ನಗೆಯೂ ನಿನಗಾಗಿ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ಜೊತೆಯಲಿ ನೀನಿರುವಾಗ ಪಡುವ ಸಂತಸ
ನೀನಾಡಿದ ಮಾತಿನಿಂದ ಮೂಡಲು ಉಲ್ಲಾಸ
ಎಲ್ಲ ಆನಂದಗಳು ನಿನ್ನಿಂದಲೇ ಎಂದಾಗ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ಕೇಳದೆಯೂ ಹೇಳುವ ಆ ದಿನಚರಿಗಳು
ತಿಳಿದರೂ ಕೇಳುವ ಎಷ್ಟೋ ಪ್ರಶ್ನೆಗಳು
ಹೇಳದೆಯೂ ತಿಳಿವ ಮೌನ ಪ್ರೀತಿಯ ಕಂಡೂ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ನೀ ಕಾಣದೇ ಇರುವಾಗ ಪಡುವ ಕಾತರವೆಷ್ಟೋ
ನೀನಾಡುವ ಮಾತು ಆಲಿಸುವ ತವಕವೆಷ್ಟೋ
ಇಷ್ಟೆಲ್ಲಾ ಇರುವಾಗ ಇನ್ನೂ ತಡವೇತಕೋ ಮಿತ್ರಾ
ಅವಳೇ ಹೇಳಲಿ ಎಂಬ ಮೊಂಡು ಹಠವೇಕೋ
ನೀನೇ ಹೋಗಿ ಹೇಳಬಾರದೇ ಮನದ ಭಾವನೆ..

ಕವನವಲ್ಲವಿದು ಮನದಾಳದ ಭಾವನೆ..

September 28, 2011

ಹೊರಟಿರುವೆ ನಾನಿಂದು ಗೆಳೆಯರನು ಅಗಲಿ
ಬರುತಿರುವ ದು:ಖವನು ಹೇಗೆನಾ ನುಂಗಲಿ?

ಮಾತು ಮಾತಿಗೂ ನಗುವಿನಾ ಹಾಸು
ನಡುನಡುವೆ ಕೋಪದಾ ಗುಸುಗುಸು
ಹ್ರದಯದೀ ಬಂದಂತಹ ಆ ಓಡನಾಟ
ಕಂಡಿರದು ಜಗವು ಇಂತಹದೊಂದು ನೋಟ

ಅಭ್ಯಾಸದ ಅವಧಿಯೊಳು ಮಾಡಿದಂತಹ ಮೋಜು
ಬಡೆಯದಿರಲು ಮುಗುದೊಬ್ಬರ ಮನದ ರೊಜ್ಜು
ವಿಚಾರಗಳು ಬಹುವಾದರೂ ಇರುತಿತ್ತೊಂದೇ ಭಾವ
ಈ ವಿರಹದಿಂದಾಗುವುದು ಬಹಳ ನೊವ

ಅಗಲುವ ಸಮಯವದು ಸಮೀಪಿಸಲು
ಮುಗಿಯಲಾರದ ಮಾತುಗಳು ತುಂಬಿರಲು
ಹೊರಟಿರುವೆ ನಾನಿಂದು ಋಣಭಾರನಾಗಿ
ಹೇಗೆ ಕಂಡೇನು ಇಂಥಾ ಸಖ್ಯ ಎಲ್ಲಿಗೋ ಹೊಗಿ?

ಈ ಜಗಜಾತ್ರೆಯೊಳು ಇನ್ನೆಲ್ಲಿ ಕಾಣಲಿ
ಮನಸ್ಸಿನ ಭಾವನೆಗಳನ್ಯಾರಬಳಿ ಪೇಳಲಿ?
ನೊವ ಮರೆಸಿ ಹರುಷ ಸುರಿಸಿ
ಉತ್ತಮವ ಗುರುತಿಸಿ ಕೆಟ್ಟದ ತಿಳಿಸಿ
ಅತ್ತು ಅಳಿಸಿ,ನಕ್ಕು ನಲಿಸಿದವರ ಬಿಟ್ಟು
ಬಹುದೂರ ಪಯಣಿಸಿ ಹೊಗಲಿ ಎಲ್ಲಿ? ಹೇಗಿರಲಿ ನಾನಲ್ಲಿ?

ದು:ಖದ ಮೊಡವದು ಗುಡುಗಿರಲು
ಕಣ್ಣಂಚಿನಲಿ ಮಳೆಯಿರಲು ಆವಿಯಾಗದೇ ಹೊಗದು
ಸುರಿಸುತಲೂ ಇಹುದು ಸುರಿಯುತಲಿಹುದು..

ಏಕೆ?

September 28, 2011

ವರುಷಗಳೇ ಕಳೆದವು ಆ ದಿನಗಳು ಉರುಳಿ
ಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ

 

ನಿನ್ನ ಪ್ರೀತಿಯ ಕಂಡೂ ಕಾಣದವರು
ನೆನೆಯಲು ಇನ್ನೂ ಅರ್ಹರೇ? ಏಕೆ

 

ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋ
ಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ

 

ನಿನ್ನ ಹೂವಂತಹ ಹ್ರದಯದಲಿ
ಆ ಬಾಡಿದ ಪ್ರೀತಿಯ ನೆನಪುಗಳೇಕೆ

 

ಯಾರು ನಿನ್ನ ಭಾವನೆಗಳನ್ನರಿಯದೇ ಹೊದರೋ
ಅವರ ಅಧಿಕಾರ ನಿನ್ನ ಹ್ರದಯದ ಮೇಲೆ ಇನ್ನೂ ಏಕೆ

 

ಯಾವ ಸಂಬಂಧ ಮುಗಿ(ರಿ)ದು ಹೋಯಿತೋ
ಅದು ಈಗಲೂ ನಿನ್ನ ಉಸಿರಾಗಿರುವುದೇಕೆ

 

ನಿನ್ನ ವರ್ತಮಾನದಲ್ಲೇ ಇರುವವರು
ನಿನ್ನ ಪಾಲಿಗೆ ಅತೀತ (ಅತೀ ಅತ್ತ)ವಾದುದೇಕೆ ?

 

ಮಾಯೆ

September 28, 2011

ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ
ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ

ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ
ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ

ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ ಕಾಯುವೆ
ಆ ಒಂದು ನೋಟವನ್ನು ದಿನವೆಲ್ಲಾ ಸ್ಮರಿಸುವೆ

ತುಟಿಗಳಲಿ ಬರುವ ಹೆಸರಿಗಾಗಿ ತುದಿಗಾಲಲಿ ನಿಲ್ಲುವೆ
ಆ ಹೆಸರು ನನ್ನದೆನಲು ಆಗಸದಿ ತೇಲಾಡುವೆ

ನಮ್ಮ ನಡುವೆ ನಡೆದ ತಮಾಷೆಗಳನ್ನು ಪದೇ ಪದೇ ನೆನೆಯುವೆ
ಅದರಿಂದಾದ ಮುನಿಸು ನೆನೆಸಿ ಮುಗುಳ್ನಗೆಯ ಬೀರುವೆ

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

September 28, 2011

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ
ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ|

ಸಿಂಹಗಳ ಗುಂಪಿದು ತಾಳಕೆ ಹೊಂದುತ
ರಾಷ್ತ್ರಾಭಿಮಾನದ ವಾದ್ಯವ ನುಡಿಸುತ
ನಾಭಿಯಿಂದ ಬಂದಂತಹ ಹಿಂದುತ್ವದ ಧ್ವನಿಯಿದು
ಮುಗಿಲೆತ್ತರ ಏರಲಿದೆ ಅಭಿಮಾನದ ಗುಡುಗಿದು

ನಾವೆಲ್ಲಾ ಹಿಂದು ಎಂಬ ಅಭಿಮಾನವು ಬೆಳೆಯಲಿ
ಪುಷ್ಪವ್ರಷ್ಟಿಯ ಜೊತೆಗೆ ಜೈಕಾರವೂ ಮೊಳಗಲಿ
ಓಂಕಾರದ ನಾದದಲ್ಲಿ ಲೊಕವೆಲ್ಲ ಮುಳುಗಲಿ
ವಿಶ್ವಬಂಧು ಭಾವನೆಯು ಮನದಾಳದಿ ಮೂಡಲಿ

ನಾವೆಲ್ಲ ಒಂದು ಎಂಬ ಒಮ್ಮತವು ಹೊಮ್ಮಲಿ
ಮರುತದ ಪ್ರತಿ ಕಣದಲ್ಲಿ ಝೇಂಕಾರವು ಕೇಳಲಿ
ಸಾಗರದ ಸರಿಸಮದಲ್ಲಿ ಅಲೆಗಳು ಭೋರ್ಗರೆಯಲಿ
ಹಿಂದುರಾಷ್ಟ್ರ ನಂದಾದೀಪ ಚಿರಕಾಲ ಬೆಳಗಲಿ

ಸಪ್ತಸಾಗರದಾಚೆಗೆ ಏಕತ್ಮತಾ ಮಂತ್ರವು
ಮನೆ ಮನೆಯಲಿ ಮನಮನದಲಿ ಆಗಲದು ಪಕ್ವವು
ವಿಶ್ವವೆಲ್ಲವಾಗುವುದು ಭಗವಂತನ ಮಂದಿರವು
ಸಂಘಟನ ಶಕ್ತಿಯೇ ಅದಕ್ಕಿರುವ ತಂತ್ರವು.

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

ನನ್ನ ಹಳೆಯ ಬ್ಲಾಗ್ ಗಳು

September 28, 2011

http://throughdawindow.livejournal.com/
http://shrikantkalkoti.blogspot.com/ 

ನಾನು ಡಚಾವು-೩

December 6, 2010
ಶಿಕ್ಷೆಗಳು
ಶಿಕ್ಷೆಗಳು ಶಿಬಿರದ ಕಾಯಂ ಮತ್ತು ಸಾಮಾನ್ಯ ವಿಚಾರಗಳಾಗಿದ್ದವು.ಏಳಲು ತಡವಾದರೆ.ಹಾಸಿಗೆ ಸರಿ ಇರದಿದ್ದರೆ,ಬಟ್ಟೆ ಕೊಳೆಯಾಗಿದ್ದಾರೆ.SS ಗಳ ಮುಂದೆ ತಲೆ ಎತ್ತಿ ನಡೆದರೆ,ಕೋಟಿನಲ್ಲಿ ಕೈ ಹಾಕಿದರೆ,ತಲೆಯ ಮೇಲೆ ಟೋಪಿ ಇರದಿದ್ದರೆ.ಮುಖ ಮಾರ್ಜನ ಮಾಡಿರದಿದ್ದರೆ,ಇವಕ್ಕೆಲ್ಲ ಕ್ರೂರ ಶಿಕ್ಷೆಗಳೇ ಕಾಯುತ್ತಿರುತ್ತಿದ್ದವು.ಕಟ್ಟಿಗೆಯ ಒಂದು ಮಂಚದ ಮೇಲೆ ಬರೀ ಮೈಯಲ್ಲಿ ಮಲಗಿಸಿ,ಬೆನ್ನಿನ ಮೇಲೆ ೨೫ ಚಾಟಿ ಏಟಿನ ರುಚಿ  ತೋರಿಸುತ್ತಿದ್ದರು.ಚಿಮುಕುತ್ತಿದ್ದ ನೆತ್ತರನ್ನು ತೊಳೆಯಲು ಉಪ್ಪಿನ ನೀರನ್ನು ಹಾಕುತ್ತಿದ್ದರು.ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳು ಪ್ರತೀ ಏಟಿನ ಸಂಖ್ಯೆಗಳನ್ನು ಜರ್ಮನ್ ಭಾಷೆಯಲ್ಲೇ ಜೋರಾಗಿ ಎಣಿಸಬೇಕಿತ್ತು.ಎಣಿಸುವಲ್ಲಿ ತಪ್ಪಾದರೆ ಅಥವಾ ಧ್ವನಿ ಕ್ಷೀಣವಾದರೆ ಮತ್ತೆ ಮೊದಲಿನಿಂದ ಎಣಿಕೆ ಹಾಗೂ ಏಟು.ಇವರ ಆರ್ತನಾದ ಎಲ್ಲರಿಗೂ ಮುಟ್ಟಲಿ ಎಂದು ಬಾಗಿಲುಗಳನ್ನು,ಕಿಟಕಿಗಳನ್ನು ತೆಗೆದಿಟ್ಟಿರುತ್ತಿದ್ದರು.ಎಷ್ಟೋ ಕೈದಿಗಳು ಅಲ್ಲೇ ಮೂರ್ಛೆಯೂ ಹೋದದ್ದುಂಟು.ಕೆಲವೊಬ್ಬರು ಗಟ್ಟಿಗರು ಒಂದೇ ಬಾರಿಗೆ ಶಿಕ್ಷೆ ಪೂರ್ಣಗೊಳಿಸುತ್ತಿದ್ದರು.ಎಷ್ಟೋ ಜನ ಸತ್ತು ಹೋದ ಉದಾಹರಣೆಗಳೂ ಇವೆ.ಮೂರ್ಛೆ ಹೋದ ಕೈದಿಗಳು ಎಚ್ಚರವಾದಮೇಲೆ  ಶಿಕ್ಷೆ ಮತ್ತೆ ಜಾರಿಯಾಗುತ್ತಿತ್ತು.

ಚಾಟಿ ಏಟಿನ ಶಿಕ್ಷೆ

ಸಾಮಾನ್ಯವಾಗಿದ್ದ ಇನ್ನೊಂದು ಕ್ರೂರ ಶಿಕ್ಷೆ ಎಂದರೆ,ಕೈದಿಯ ಕೈಗಳನ್ನು ಹಗ್ಗದಿಂದ ಕಟ್ಟಿ ನೆಲದಿಂದ ಸುಮಾರು ೨ ಅಡಿ ಎತ್ತರದಲ್ಲಿ ಮಾಳಿಗೆಗೆ ನೇತು ಹಾಕುತ್ತಿದ್ದರು.ಹಾಗು ಸಂಖ್ಯೆಗಳ ಎಣಿಕೆ ಪೂರ್ಣಗೊಳ್ಳುವ ವರೆಗೂ ಬೀಳುತ್ತಿದ್ದ ಚಾಟಿ ಏಟುಗಳು.ಶಿಕ್ಷೆ ಮುಗಿದ ಮೇಲೂ ಘಂಟೆಗಟ್ಟಲೆ ಹಾಗೇ ನೇತು ಹಾಕುತ್ತಿದ್ದರು.
ಯಾರು ಯಾರಿಗೆ ಹೇಳಬೇಕು?ಎಲ್ಲರೂ ನೋವು ಉಣ್ಣುತ್ತಿರುವವರೇ.ಅವರ ಚರ್ಮ ಸುಲಿದು ಮಾಂಸ ಕಿತ್ತು ಬರುತ್ತಿದ್ದರೆ ನನ್ನ ಕರಳು ಕಿತ್ತು ಬಂದಂಗಾಗುತ್ತಿತ್ತು.ಈ ಶಿಬಿರಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುವವರೂ ಇರಲಿಲ್ಲ,ರೋದನಗಳೆಲ್ಲ ಮುಗಿಲು ಮುಟ್ಟಿದರೂ ಸಾಂತ್ವನ ಹೇಳುವವರು ಇರಲಿಲ್ಲ.ಅಲ್ಲಿ ನಾನು ಮೂಕ ಪ್ರೇಕ್ಷಕಿ ಮಾತ್ರ.ದೇವರೇ,ನನ್ನ ನೆಲದ ಮೇಲೆ ನಡೆಯುತ್ತಿರುವ ಇಂತಹ ಕ್ರೂರತನಕ್ಕೆ ಕೊನೆಯೇ ಇಲ್ಲವೇ? ಎಂದು ಹಗಲಿರುಳೂ ರೋದಿಸಿದ್ದೇನೆ.ಆದರೆ ಆ ದೇವರೂ ಸಹ ಕಿವುಡ,ಕುರುಡ ಎಂದರಿಯಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ನಿಲ್ಲುವ ಕೋಣೆಯ ಶಿಕ್ಷೆ

೧೯೪೪ ರಲ್ಲಿ ಧರ್ಮಗುರುಗಳು ಇದ್ದ ಬರಾಕ್ ಗಳಲ್ಲಿನ ೪ ಕೋಣೆಗಳನ್ನು ಖಾಲಿ ಮಾಡಿ ಒಂದು ಹೊಸ ಶಿಕ್ಷೆಯನ್ನು ಅಳವಡಿಕೆ ಮಾಡಲಾಯಿತು.ಅದೇ ನಿಲ್ಲುವ ಕೋಣೆಯ ಶಿಕ್ಷೆ.ಈ ಶಿಕ್ಷೆ ಶಿಬಿರದಲ್ಲೇ ಅತ್ಯಂತ ಕ್ರೂರವಾದದ್ದು.ಇವುಗಳ ರಚನೆ(set up) ಹೇಗಿತ್ತೆಂದರೆ,ಒಂದು ಕೋಣೆಯಲ್ಲಿ ೪ರಂತೆ, ೭೦*೭೦ ಸೆಂ.ಮೀ ಜಾಗದಲ್ಲಿ ಕೇವಲ ನಿಲ್ಲಲು ಮಾತ್ರ ಬರುವಂತಹ ಸೆಲ್ ಗಳನ್ನು ಮಾಡಿದ್ದರು.ಚಾಟಿ ಏಟು ತಿಂದು ಬಂದ ಕೈದಿಗಳನ್ನು ಇಲ್ಲಿ ನಿರಂತರವಾಗಿ ಸುಮಾರು ೭೨ ಘಂಟೆಗಳ ವರೆಗೆ ಅಂದರೆ ಸುಮಾರು ೩ ದಿನಗಳವರೆಗೆ ನಿಲ್ಲಿಸಲಾಗುತ್ತಿತ್ತು.ಹಿಂಸೆಯನ್ನು ಹೆಚ್ಚಿಸಲು ಬೆಳಕು ಹಾಗು ಗಾಳಿಯನ್ನು ಕಡಿಮೆ ಮಾಡಲಾಗುತ್ತಿತ್ತು.ಇದೊಂದು ನರಕಸದೃಶ ಯಾತನೆ.(೧೯೪೫ ರಲ್ಲಿ ಈ ರಚನೆಯನ್ನು ಕಿತ್ತಿ ಹಾಕಲಾಯಿತು).

ತಂತಿಯ ಬೇಲಿ

ಈ ಯಾತನೆಗಳಿಂದ ರೋಸಿ ಹೋಗಿ,ತಪ್ಪಿಸಿಕೊಂಡು ಹೋಗಲೂ ಸಹ ಕೆಲ ಕೈದಿಗಳು ಪ್ರಯತ್ನ ನಡೆಸಿದರು.ಆದರೆ ಅವುಗಳೆಲ್ಲವೂ ವಿಫಲವಾದವು.ಅಂತಹ ಎಲ್ಲಾ ಪ್ರಯತ್ನಗಳು ಸಫಲ ವಾಗದಂತೆ ಮೊದಲೇ ಕ್ರಮ ಕೈಗೊಳ್ಳಲಾಗಿತ್ತು.ಬರಾಕ್ ಗಳ ಸುತ್ತಲೂ ೫ ಅಡಿಯಷ್ಟು ಅಗಲದ ಹುಲ್ಲಿನ ಹಾಸು.ಅಲ್ಲಿ SS  ನವರು ಮಾತ್ರ ನಡೆದಾಡುತ್ತಿದ್ದರು.ಕೈದಿಗಳಿಗೆ ಇದು ನಿಷೇಧಿತ ಜಾಗ.ನಂತರ ಸ್ವಲ್ಪ ಜಾಗ ಬಿಟ್ಟು ತಂತಿಯ ಬೇಲಿ.ಹಾಗೂ ಅದರಲ್ಲಿ ನಿರಂತರ ವಿದ್ಯುತ್ ಪ್ರವಾಹ.ಇಷ್ಟೆಲ್ಲಾ ಪಾರಾಗಿ ಹೋದರೂ ಬದುಕುತ್ತೆವೆಂಬ ಭರವಸೆ ಇರಲಿಲ್ಲ.ಏಕೆಂದರೆ ಹಗಲೂ ರಾತ್ರಿ ಪಹರೆ ಇಡುತ್ತಿದ್ದ ನಿರೀಕ್ಷಣ ಸೌಧದ ಸಿಬ್ಬಂದಿಗಳ ಬಂದೂಕುಗಳು ಗುಂಡು ಹೊಡೆಯಲೆಂದೇ ಕಾಯುತ್ತಿದ್ದವು.ಇದನ್ನರಿತೇ ಎಷ್ಟೋ ಕೈದಿಗಳು ಈ ವಿದ್ಯುತ್ ಪ್ರವಾಹಕ್ಕೆ ಜಿಗಿದು ಆತ್ಮಾಹುತಿ ಸಹ ಮಾಡಿಕೊಂಡರು.ಆದರೆ ಸಿಕ್ಕು ಬಿದ್ದವರ ಪಾಡು ಆ ದೇವರಿಗೇ ಪ್ರೀತಿ.ಈ ರೀತಿಯ ಪ್ರಯತ್ನಗಳು ಹೆಚ್ಚಾದಂತೆ SS ನವರು ಹುಲ್ಲಿನ ಹಾಸು ಮತ್ತು ಬೇಲಿಯ ನಡುವೆ ಸುಮಾರು ೬*೬ ಅಡಿಯಷ್ಟು ಆಳವಾದ ಖಾಲಿ ಕಂದಕವನ್ನು ತೊಡಿದರು.ನಂತರ ಓಡಿ ಹೋಗುವುದು,ಆತ್ಮಾಹುತಿ ಮಾಡಿಕೊಳ್ಳುವುದು ಯಾರಿಗೂ ಸಾಧ್ಯವಾಗಲಿಲ್ಲ.
SS ನವರ ಮೂರರಷ್ಟಿದ್ದ ಕೈದಿಗಳು ಸಿಡಿದೇಳುವದಕ್ಕಿಂತ ನನಗೆ ಅನಿಸಿದ ಅಚ್ಚರಿಯ ಸಂಗತಿ ಎಂದರೆ,ಇಷ್ಟೆಲ್ಲಾ ನಡೆಯುತ್ತಿದ್ದರೂ ಜಗತ್ತಿನ ಜನರಿಗೆ ಈ ದುರುಳತನದ ಸುದ್ದಿಯೇ ಇರಲಿಲ್ಲ.ಪತ್ರಿಕೆಗಳು ಬಂಧಿಗಳನ್ನೆಲ್ಲ ದಂಗೆಕೋರರು,ಗೂಂಡ ಪ್ರವೃತ್ತಿಯವರು.ಮೈಗಳ್ಳರು ಎಂದು ಬಿಂಬಿಸಿ ಅವರನ್ನು ಸರಿ ದಾರಿಗೆ ತರುವ,ಶಿಸ್ತು ಹಾಗೂ ಶ್ರಮ ವಹಿಸಿ ಕೆಲಸ ಮಾಡಿಸುವ ಶಿಬಿರ ಎಂದು ವೈಭವೀಕರಿಸಿತ್ತು.ಇದನ್ನೇ ನಿಜ ವೆಂದು ವಿದೇಶಿ ಮಾಧ್ಯಮಗಳೂ ಸಹ ಬರೆದವು.ಆದರೆ ಗುಪ್ತ ರೀತಿಯಲ್ಲಿ ಅಲ್ಲೊಂದು ಇಲ್ಲೊಂದು ಸತ್ಯ ಲೇಖನಗಳು ಬರುತ್ತಿದ್ದರೂ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.ಅದು ನನ್ನ ಪಾಲಿನ ಒಂದು ದೊಡ್ಡ ದುರಂತ..
ಮುಂದುವರೆಯುವುದು..

Follow

Get every new post delivered to your Inbox.