Archive for the ‘ಕವನಗಳು’ Category

ಸಣ್ಣ ಸಣ್ಣ ಖುಷಿಗಳು ..

ಫೆಬ್ರವರಿ 19, 2020

ಮುನಿಸು,ನಗು, ಅಳು, ಜಗಳ ಇವುಗಳೆಲ್ಲ ಜೀವನದ ಒಡನಾಡಿಗಳು.ಹಾಗೆಯೇ ಚಿರಸ್ಮರಣೀಯ ನೆನಪುಗಳು ಸಹ.ಕಳೆದ ಕ್ಷಣಗಳನ್ನು ನೆನಪು ಹಾಕುತ್ತ ಕುಳಿತರೆ ಕಣ್ಣಂಚಿನಲ್ಲಿ ಹನಿ ಒಡೆಯದೇ ಹೋಗದು.ಮತ್ತೆ ಮತ್ತೆ ಅನುಭವಿಸಬೇಕೆಂದರೂ ಆಗದ,ಮನದಾಳದಿಂದಲೂ ಮಾಸದ,ಎಲ್ಲರ ಜೀವನದಲ್ಲೂ ಹಾಸುಹೊಕ್ಕಾಗಿರುವ ಇವು ಸಣ್ಣ ಸಣ್ಣ ಖುಷಿಗಳು ..ಇಣುಕಿ ನೋಡಿ
ಇವೆಲ್ಲಾ ನನ್ನವು ಮಾತ್ರವಲ್ಲ..

ಅಜ್ಜ ಕದ್ದು ಮುಚ್ಚಿ ಕೊಟ್ಟ ಪೆಪ್ಪರಮಿಂಟ
ಅಜ್ಜಿ ಹೇಳುತ್ತಿದ್ದ ಕಥೆಗಳು
ಅಪ್ಪಾಜಿ ಕೊಟ್ಟ ಮೊದಲ ಬಕ್ಷೀಸು
ಡಾಕ್ಟರ್ ಚುಚ್ಚಿದ ಇಂಜೆಕ್ಷನ್ನು
ಆ ಕಹಿ ಕಹಿ ಔಷಧಿ ಸ್ಪೂನು
ಜ್ವರ ಬಂದಾಗ ತಿಂದಂತಹ ಸಪ್ಪನೆಯ ಸಾರು ಅನ್ನ..

ಸಾಲ್ಯಾಗ ಆದ ಮೊದಲ ಕಪಾಳಮೊಕ್ಷ
ಕ್ಲಾಸಿನ ಹೊರಗೆ ನಿಂತು ತೆಗೆದ ಊಠಕ ಬೈಠಕ್
ಮಗ್ಗಿ ತಪ್ಪು ತಪ್ಪು ಅಂದು ಬಯ್ಯಿಸಿಕೊಂಡದ್ದು
ಸಂಕ್ರಾಂತಿ ದಿನ ತೂರಾಡಿದ ಎಳ್ಳುಗಳು
ಶಿಕ್ಷಕರ ದಿನದ ಹಿಂದಿನ ದಿನದ ವಾತಾವರಣ
ಬರ್ತ್ ಡೇ ದಿನ ಕೊಟ್ಟ ಚಾಕೊಲೇಟು..
ಗೆಳೆಯರು ಗಿಫ್ಟ್ ಕೊಟ್ಟ ಪೆನ್ಸಿಲ್ ಮತ್ತು ರಬ್ಬರ್ರು
ಹಾಕಿಕೊಂಡ ಮೊದಲ ಉದ್ದನೆಯ ಪ್ಯಾಂಟು

ಮ್ಯಾಥ್ಸ್ ಪೇಪರ್ಗೆ ಬಿದ್ದ ಕಡಿಮೆ ಮಾರ್ಕ್ಸು
ಪ್ರಗತಿ ಪತ್ರಿಕೆ ಹೆದರಿ ಹೆದರಿ ಅಪ್ಪಾಜಿಗೆ ತೋರಿಸಿದ್ದು
ಹಿಸ್ಟರಿ ಕ್ಲಾಸ್ನ್ಯಾಗ ಹೊಡೆದ ನಿದ್ದಿ
ಪರೀಕ್ಷೆದಾಗ ಹೊಡೆದ ಕಾಪಿ
ಕಾಪಿ ಚೀಟಿ ಇಟ್ಟು ಸಿಕ್ಕ ಆ ಕ್ಷಣ

ಸಾಲಿ ಬಿಟ್ಟ ಮ್ಯಾಲಿನ ಸೈಕಲ್ ರೇಸು
ಸೂಟಿ ದಿನದ ಸ್ಪೆಷಲ್ ಕ್ಲಾಸು
ಶನಿವಾರ ಮುಂಜಾನೆಯ ಮಾಸ್ಸ್ ಡ್ರಿಲ್ಲು
ಅದಕ್ಕ ಹೋಗದ ಹೊಡೆದ ಬಂಕು
ಮಳೆ ನೀರಿನ ಕೆಂಪು ರೊಜ್ಜಿನ್ಯಾಗ ಕುಣಿದದ್ದು
ಛತ್ರಿ ತಿರಗಿಸ್ಕೊತ ನೀರು ಸಿಡಿಸಿದ್ದು
ರೇನ್ ಕೋಟ ಪಾಟೀಚೀಲದಾಗ ಇಟ್ಟು ತೊಯಿಸ್ಕೊತ ಬಂದದ್ದು

ಕ್ಲಾಸಿನ ಹುಡುಗಿ ಕೊಟ್ಟ ಫಸ್ಟ ಸ್ಮೈಲು
ಸುಖಾಸುಮ್ಮನೆ ರೇಗಿಸುತ್ತಿದ್ದ ಹುಡುಗರು
ಗುಂಪಿನಲ್ಲಿ ಹುಡುಗಿಯರಿಗೆ ಹೊಡೆದ ಸೀಟೀ
ಕಾಡಿದಾಗ ಮುನಿಸಿಕೊಂಡು ಹೋದ ಗೆಳತಿ

ಗೋಡೆ ಸ್ಟಂಪ್ ನ ಹಾಪ್ ಪಿಚ್ಚ್ ಮ್ಯಾಚು
ಲಗೋರಿ ಡಬ್ಬಾ ಡುಬ್ಬಿ ಒನ್ ಟಿಪ್ಪಾ ಕ್ಯಾಚು
ಮಳೆ ಬಿಸಿಲೆನ್ನದೆ ಆಡುತ್ತಿದ್ದ ಸೂಟಿ
ರೋಡಿನಲ್ಲೇ ಆಡಿದ ಕ್ರಿಕೆಟ್ಟು
ಒಣಗಿದ ತೆಂಗಿನ ಗರಿಯ ಬ್ಯಾಟು
ದಿನಾಲೂ ಒಡೆಯುತ್ತಿದ್ದ ಎಂ ಆರ್ ಐ ಬಾಲು

ಮಾವು,ನೇರಳೆ,ಹುಣಸೆಗೆ ಒಗೆದ ಕಲ್ಲು
ಮಾಲಕರ ಒಡೆದ ಮನೆಯ ಹೆಂಚು
ಓಡುವಾಗ ಬಿದ್ದು ಕೈಗೆ ಹಾಕಿದ ಪ್ಲಾಸ್ಟರು
ಅದರ ಮೇಲೆ ಬರೆದ ಹೆಸರುಗಳು
ಕಾಲೇಜು ಮತ್ತು ಆಫೀಸಿನ ಮೊದಲ ದಿನ

ಗಳಿಸಿದ ಮೊದಲ ಗರಿ ಗರಿ ನೋಟು
ಅಮ್ಮನಿಗೆ ಕೊಡಿಸಿದ ಮೊದಲ ಸೀರೆ
ಗೆಳೆಯರ ಜೊತೆ ಮಾಡಿದ ಪ್ರವಾಸ
ಪಾರ್ಟಿಯಲ್ಲಿನ ಮೊದಲ ಪೆಗ್ಗಿನ ರುಚಿ
ಸೇದಿದ ಮೊದಲ ಸಿಗರೇಟು
ಕೊಟ್ಟ ಮೊದಲ ಲಿಫ್ಟು
ಹಾಕಿದ ಮೊದಲ ವೋಟು

ಅಬ್ಬಬ್ಬಬ್ಬಬ್ಬಾ ಎಷ್ಟೊಂದು ಖುಷಿಗಳು..

ಕಣ್ಣೀರ್ ನ್ಯಾಗೂ ಕಾಣ್ಲಿಕತ್ತಾವ,ಹೊಡೆತಗಳಲ್ಲಿ ಅವ,ಗಿಫ್ಟಿನಲ್ಲಿ,ಲಿಫ್ಟಿನಲ್ಲಿ ಬ್ಯಾಟಿನಲ್ಲಿ ಔಷಧಿಯಲ್ಲಿ…… ನೆನಪು ಮಾಡ್ಕೋತ ಹೋದ್ರ ಹಣಮಪ್ಪನ ಬಾಲನ ಖರೆ.. ಕಳೆದು ಹೋದ ಕ್ಷಣಗಳು ಯಾವಾಗಲೂ ಒಂದು ರೀತಿಯ ಅನುಪಮ ಖುಷಿ ಕೊಡ್ತಾವ.ಇದುವೇ ಜೀವ..ಇದು ಜೀವನ..
ಸ್ವಲ್ಪ ಟೈಮ್ ಇದ್ರ ಎಲ್ಲಾ ಕಾಣಿಸ್ತಾವ ..

ಸಹನೆ 

ಫೆಬ್ರವರಿ 19, 2020

ಒಡೆದ ಗೋಡೆಗಳು

ಮುರಿದ ಮೂರುತಿಗಳು

ಕೆದಕಿದ  ಕೆತ್ತನೆಗಳು

ಭಗ್ನವಾದ ಗುಡಿಗಳು

ಆರಾಧ್ಯರೆಲ್ಲಾ ನಗ್ನರಾದರು

 

ಬಲಪೂರ್ವಕ ಪರಿವರ್ತನೆಗಳು

ಪರಿವರ್ತಿತ  ದೇವಾಲಯಗಳು

ದೇವಾಲಯದ ಸಂಪತ್ತುಗಳು

ನಮ್ಮದೆಲ್ಲವೂ ತಮ್ಮವೆಂದರು

 

ಅನಾಥನಾದ ವಿಶ್ವನಾಥ

ಸೆರೆಮನೆಯೂ ಸಿಗದ ಗೊಲ್ಲ

ವಿರಾಮ ಸಿಗದ ರಾಮ

ಪಂಡಿತರನ್ನೆಲ್ಲ ಹೊಡಿದೋಡಿಸಿದರು

 

ಅಸಹನೆಗಳನ್ನೆಲ್ಲ ಸಹಿಸಿದೆವು

ಸಹಿಸಿದರೂ ಅಸಹನೀಯರೆನಿಸಿದೆವು !!

ಹಕ್ಕಿಯ ಬಲೆ

ಸೆಪ್ಟೆಂಬರ್ 28, 2011

ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ
ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ

ಸಂಜೆಯಾಗಲು ಬಲೆ ಬದಿಗಿರಿಸಿ
ಕುಳಿತೆ ಸುಮ್ಮನೆ ಧ್ಯಾನಿಸಿ
ಕೈ ಎತ್ತಿ ಕರೆದೆ ಹಕ್ಕಿಯ
ಬಂತು ಹೊರಗದು ಧಾವಿಸಿ

ಬೊಗಸೆ ಕೈಯೊಳು ಹಿಡಿದು ಮುತ್ತಿಕ್ಕಿ
ಹಾರಿ ಬಿಟ್ಟೆ ಬಾನಿಗೆ
ಆತನಿಗೆ ಆಗಾದ ಖುಷಿಯನು
ಯಾರಿಗೆ ಹೇಳಲಿ ? ಹೇಗೆ ?

ಬದಿಗೆ ಇರಿಸಿದ ಬಲೆಯು ಏತಕೋ
ಹುಳಿ ಹುಳಿ ಮುಖ ಮಾಡಿತು
ಬಾನ ಸೇರಿದ ಪುಟ್ಟ ಹಕ್ಕಿಯ
ಪಿಳಿ ಪಿಳಿ ತುಸು ನೋಡಿತು

ಪೂರ್ಣವಿರಾಮ.

ಸೆಪ್ಟೆಂಬರ್ 28, 2011

ಪರಕೀಯರು ವಿಭಜಿಸಿದ ಸುಸಂಸ್ಕೃತ ದೇಶಗಳು
ದ್ವೇಷದ ದೀಪಗಳಾದವು ಧಗ ಧಗ ಉರಿದು

ಹಿಡಿಯ ಬಯಸಿದಾಗ ಬಿಳಿಪಾರಿವಾಳವನು
ಕಪಟ ದೇಶವು ಸಾರಿತು ಅಘೋಷಿತ ಕದನವನು

ತಮ್ಮದಲ್ಲದ ಭುವಿಯೊಡೆತನಕೆ
ಭಾಡಗಿ ಸೈನ್ಯವ ತಂದಿತು
ರಕ್ತದ ಕಾಲುವೆ ಹರಿಸಿದರೂ
ಒಂದಿಂಚನೂ ಪಡೆಯದಾಯಿತು

ಅಚಲವಾದ ಆಟಲನ ಸೈನ್ಯವು
ನವಾಜನ ಆವಾಜ್ ಮುಚ್ಚಿಸಿತು
ಜಗವು ಬಯಸಿದ ಶಾಂತಿವಾಕ್ಯಕೆ
ನೀಡಿತು ಕದನವು ಪೂರ್ಣವಿರಾಮ.

ಶತ್ರುವಿಗೆ ಖಾರವಾಗುಳಿಯಿತು ಕಾರ್ಗಿಲ್
ಏನೇ ಆದರೂ ಬಿಟ್ಟು ಕೊಡೆವು ಕಾಶ್ಮೀರ್..

ಕಿಟಕಿಯಲ್ಲಿ ಮಳೆ

ಸೆಪ್ಟೆಂಬರ್ 28, 2011

ಮಟ ಮಟ ಮಧ್ಯಾಹ್ನದೊಳು
ತಪನನ ತಾಪವು ತುಂಬಿರಲು
ಉದಯವಾಯಿತಾಗ ಕಾರ್ಮೋಡ ಸಾಮ್ರಾಜ್ಯ
ಗುಡು ಗುಡು ಎಂದು ಎದೆ ನಡುಗಿಸುತ
ಪ್ರಕಾಶಮಾನವಾದ ಬೆಳಕನು ಫಕ್ಕನೆ ಬೀರುತ
ಎತ್ತಿ ಒಗೆಯುವ ವೇಗದಿ ಬರುತಿರುವ
ಮಾರುತದ ಎದುರು ಕುಬ್ಜನಾದ ಆ ರವಿ

ಒಮ್ಮೆಲೇ ತಲೆ ಸೀಳುವ ಹನಿಗಳೊಡನೆ
ಧರೆಗೆ ದಂಡೆತ್ತಿ ಬಂದ ಮಳೆರಾಯ
ನಡು ನಡುವೆ ಘರ್ಜಿಸುತ ತಲೆ ಎತ್ತಿ ನಿಂತ
ಹೆಮ್ಮರಗಳ ಶಿರ ಬುಡ ಮಾಡುತ್ತ
ಮನ ಮನಗಳ ರಂಜಿಸಿ
ಕೆರೆ ಕಂದಕಗಳ ತಣಿಸಿ
ಚರಂಡಿಗಳ ಬರಿದಾದ ಒಡಲವ
ತುಂಬಿ ತುಳುಕಾಡಿಸಿದ

ಎಲ್ಲವನ್ನೂ ಅಲಕ್ಷಿಸುತ್ತ ಭೂಮಿಯನ್ನಾಳಿದ
ಮಾನವ ಕುಳಿತಿದ್ದ ಮನೆಯ ಮೂಲೆಯಲ್ಲಿ ತೆಪ್ಪಗೆ..

೧೦-೮-೨೦೦೧ ರ ವಿಜಯ ಕರ್ನಾಟಕದಲ್ಲಿ ಸಹ ಪ್ರಕಟ

ನೀನೇ ಹೇಳಿ ನೋಡೊಮ್ಮೆ..

ಸೆಪ್ಟೆಂಬರ್ 28, 2011

ನಿನ್ನ ಕಣ್ತಪ್ಪಿಸಿ ನೋಡುತಿರುವ ಆ ಕಂಗಳು
ನಿನ್ನಿಂದಲೇ ನಾಚಿ ಬಿದ್ದಿಹ ಗಲ್ಲದ ಗುಳಿಯು
ಅರಿಯದೇ ಮೂಡಿಹ ಆ ಮುಗುಳ್ನಗೆಯೂ ನಿನಗಾಗಿ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ಜೊತೆಯಲಿ ನೀನಿರುವಾಗ ಪಡುವ ಸಂತಸ
ನೀನಾಡಿದ ಮಾತಿನಿಂದ ಮೂಡಲು ಉಲ್ಲಾಸ
ಎಲ್ಲ ಆನಂದಗಳು ನಿನ್ನಿಂದಲೇ ಎಂದಾಗ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ಕೇಳದೆಯೂ ಹೇಳುವ ಆ ದಿನಚರಿಗಳು
ತಿಳಿದರೂ ಕೇಳುವ ಎಷ್ಟೋ ಪ್ರಶ್ನೆಗಳು
ಹೇಳದೆಯೂ ತಿಳಿವ ಮೌನ ಪ್ರೀತಿಯ ಕಂಡೂ
ತಡವೇಕೆ
ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ

ನೀ ಕಾಣದೇ ಇರುವಾಗ ಪಡುವ ಕಾತರವೆಷ್ಟೋ
ನೀನಾಡುವ ಮಾತು ಆಲಿಸುವ ತವಕವೆಷ್ಟೋ
ಇಷ್ಟೆಲ್ಲಾ ಇರುವಾಗ ಇನ್ನೂ ತಡವೇತಕೋ ಮಿತ್ರಾ
ಅವಳೇ ಹೇಳಲಿ ಎಂಬ ಮೊಂಡು ಹಠವೇಕೋ
ನೀನೇ ಹೋಗಿ ಹೇಳಬಾರದೇ ಮನದ ಭಾವನೆ..

ಕವನವಲ್ಲವಿದು ಮನದಾಳದ ಭಾವನೆ..

ಸೆಪ್ಟೆಂಬರ್ 28, 2011

ಹೊರಟಿರುವೆ ನಾನಿಂದು ಗೆಳೆಯರನು ಅಗಲಿ
ಬರುತಿರುವ ದು:ಖವನು ಹೇಗೆನಾ ನುಂಗಲಿ?

ಮಾತು ಮಾತಿಗೂ ನಗುವಿನಾ ಹಾಸು
ನಡುನಡುವೆ ಕೋಪದಾ ಗುಸುಗುಸು
ಹ್ರದಯದೀ ಬಂದಂತಹ ಆ ಓಡನಾಟ
ಕಂಡಿರದು ಜಗವು ಇಂತಹದೊಂದು ನೋಟ

ಅಭ್ಯಾಸದ ಅವಧಿಯೊಳು ಮಾಡಿದಂತಹ ಮೋಜು
ಬಡೆಯದಿರಲು ಮುಗುದೊಬ್ಬರ ಮನದ ರೊಜ್ಜು
ವಿಚಾರಗಳು ಬಹುವಾದರೂ ಇರುತಿತ್ತೊಂದೇ ಭಾವ
ಈ ವಿರಹದಿಂದಾಗುವುದು ಬಹಳ ನೊವ

ಅಗಲುವ ಸಮಯವದು ಸಮೀಪಿಸಲು
ಮುಗಿಯಲಾರದ ಮಾತುಗಳು ತುಂಬಿರಲು
ಹೊರಟಿರುವೆ ನಾನಿಂದು ಋಣಭಾರನಾಗಿ
ಹೇಗೆ ಕಂಡೇನು ಇಂಥಾ ಸಖ್ಯ ಎಲ್ಲಿಗೋ ಹೊಗಿ?

ಈ ಜಗಜಾತ್ರೆಯೊಳು ಇನ್ನೆಲ್ಲಿ ಕಾಣಲಿ
ಮನಸ್ಸಿನ ಭಾವನೆಗಳನ್ಯಾರಬಳಿ ಪೇಳಲಿ?
ನೊವ ಮರೆಸಿ ಹರುಷ ಸುರಿಸಿ
ಉತ್ತಮವ ಗುರುತಿಸಿ ಕೆಟ್ಟದ ತಿಳಿಸಿ
ಅತ್ತು ಅಳಿಸಿ,ನಕ್ಕು ನಲಿಸಿದವರ ಬಿಟ್ಟು
ಬಹುದೂರ ಪಯಣಿಸಿ ಹೊಗಲಿ ಎಲ್ಲಿ? ಹೇಗಿರಲಿ ನಾನಲ್ಲಿ?

ದು:ಖದ ಮೊಡವದು ಗುಡುಗಿರಲು
ಕಣ್ಣಂಚಿನಲಿ ಮಳೆಯಿರಲು ಆವಿಯಾಗದೇ ಹೊಗದು
ಸುರಿಸುತಲೂ ಇಹುದು ಸುರಿಯುತಲಿಹುದು..

ಏಕೆ?

ಸೆಪ್ಟೆಂಬರ್ 28, 2011

ವರುಷಗಳೇ ಕಳೆದವು ಆ ದಿನಗಳು ಉರುಳಿ
ಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ

 

ನಿನ್ನ ಪ್ರೀತಿಯ ಕಂಡೂ ಕಾಣದವರು
ನೆನೆಯಲು ಇನ್ನೂ ಅರ್ಹರೇ? ಏಕೆ

 

ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋ
ಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ

 

ನಿನ್ನ ಹೂವಂತಹ ಹ್ರದಯದಲಿ
ಆ ಬಾಡಿದ ಪ್ರೀತಿಯ ನೆನಪುಗಳೇಕೆ

 

ಯಾರು ನಿನ್ನ ಭಾವನೆಗಳನ್ನರಿಯದೇ ಹೊದರೋ
ಅವರ ಅಧಿಕಾರ ನಿನ್ನ ಹ್ರದಯದ ಮೇಲೆ ಇನ್ನೂ ಏಕೆ

 

ಯಾವ ಸಂಬಂಧ ಮುಗಿ(ರಿ)ದು ಹೋಯಿತೋ
ಅದು ಈಗಲೂ ನಿನ್ನ ಉಸಿರಾಗಿರುವುದೇಕೆ

 

ನಿನ್ನ ವರ್ತಮಾನದಲ್ಲೇ ಇರುವವರು
ನಿನ್ನ ಪಾಲಿಗೆ ಅತೀತ (ಅತೀ ಅತ್ತ)ವಾದುದೇಕೆ ?

 

ಮಾಯೆ

ಸೆಪ್ಟೆಂಬರ್ 28, 2011

ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ
ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ

ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ
ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ

ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ ಕಾಯುವೆ
ಆ ಒಂದು ನೋಟವನ್ನು ದಿನವೆಲ್ಲಾ ಸ್ಮರಿಸುವೆ

ತುಟಿಗಳಲಿ ಬರುವ ಹೆಸರಿಗಾಗಿ ತುದಿಗಾಲಲಿ ನಿಲ್ಲುವೆ
ಆ ಹೆಸರು ನನ್ನದೆನಲು ಆಗಸದಿ ತೇಲಾಡುವೆ

ನಮ್ಮ ನಡುವೆ ನಡೆದ ತಮಾಷೆಗಳನ್ನು ಪದೇ ಪದೇ ನೆನೆಯುವೆ
ಅದರಿಂದಾದ ಮುನಿಸು ನೆನೆಸಿ ಮುಗುಳ್ನಗೆಯ ಬೀರುವೆ

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

ಸೆಪ್ಟೆಂಬರ್ 28, 2011

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ
ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ|

ಸಿಂಹಗಳ ಗುಂಪಿದು ತಾಳಕೆ ಹೊಂದುತ
ರಾಷ್ತ್ರಾಭಿಮಾನದ ವಾದ್ಯವ ನುಡಿಸುತ
ನಾಭಿಯಿಂದ ಬಂದಂತಹ ಹಿಂದುತ್ವದ ಧ್ವನಿಯಿದು
ಮುಗಿಲೆತ್ತರ ಏರಲಿದೆ ಅಭಿಮಾನದ ಗುಡುಗಿದು

ನಾವೆಲ್ಲಾ ಹಿಂದು ಎಂಬ ಅಭಿಮಾನವು ಬೆಳೆಯಲಿ
ಪುಷ್ಪವ್ರಷ್ಟಿಯ ಜೊತೆಗೆ ಜೈಕಾರವೂ ಮೊಳಗಲಿ
ಓಂಕಾರದ ನಾದದಲ್ಲಿ ಲೊಕವೆಲ್ಲ ಮುಳುಗಲಿ
ವಿಶ್ವಬಂಧು ಭಾವನೆಯು ಮನದಾಳದಿ ಮೂಡಲಿ

ನಾವೆಲ್ಲ ಒಂದು ಎಂಬ ಒಮ್ಮತವು ಹೊಮ್ಮಲಿ
ಮರುತದ ಪ್ರತಿ ಕಣದಲ್ಲಿ ಝೇಂಕಾರವು ಕೇಳಲಿ
ಸಾಗರದ ಸರಿಸಮದಲ್ಲಿ ಅಲೆಗಳು ಭೋರ್ಗರೆಯಲಿ
ಹಿಂದುರಾಷ್ಟ್ರ ನಂದಾದೀಪ ಚಿರಕಾಲ ಬೆಳಗಲಿ

ಸಪ್ತಸಾಗರದಾಚೆಗೆ ಏಕತ್ಮತಾ ಮಂತ್ರವು
ಮನೆ ಮನೆಯಲಿ ಮನಮನದಲಿ ಆಗಲದು ಪಕ್ವವು
ವಿಶ್ವವೆಲ್ಲವಾಗುವುದು ಭಗವಂತನ ಮಂದಿರವು
ಸಂಘಟನ ಶಕ್ತಿಯೇ ಅದಕ್ಕಿರುವ ತಂತ್ರವು.

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ