ಹೆಸರಿನ ಗಮ್ಮತ್ತುಗಳು..

ಹೆಸರು ಜೀವಿಗಳನ್ನು ಸರಳವಾಗಿ ಗುರುತಿಸಲು ಇರುವಂಥವವು.ಕೆಲವೊಂದು ಅತೀ ದೊಡ್ಡವು,ಕೆಲವೊಂದು ಅತೀ ಚಿಕ್ಕವು,ಕೆಲವೊಂದು ಸರಳ ಸುಂದರ ಹಾಗೂ ಕೆಲವೊಂದು ಅಷ್ಟೇ ಕ್ಲಿಷ್ಟವೂ ಸಹ.ಹಂಗ ಕೆಲವೊಂದು ಹಾಸ್ಯಾಸ್ಪದ ಅಂತನೂ ಅನಸ್ತಾವ..

ಆದರೆ ಏನೇ ಇರಲಿ..

ಮನುಷ್ಯನಿಗೆ ಅವನ ಹೆಸರು ಯಾವುದೇ ದೇಶ,ಭಾಷೆಯಲ್ಲೂ ಅತೀ ಸಂತೋಷ ನೀಡುವ ಪದ..ಅನ್ನೋದಂತೂ ಖರೆ.

ಎಲ್ಲ ಹೆಸರಿಗೂ ಒಂದೊಂದು ಅರ್ಥ,ಇತಿಹಾಸ ಇದ್ದೆ ಇರ್ತದ.ಹಿಂದೂಸ್ಥಾನ ಅಂದ್ರ ಹಿಂದೂಗಳು ಇರುವ ತಾಣ.ಮುರಾರಿ-ಮುರ ಎಂಬ ರಾಕ್ಷಸನನ್ನು ಕೊಂದವನು ಯಾರೋ ಅವನು(ಕೃಷ್ಣ)..ಹಿಂಗ ಹತ್ತು ಹಲವು.

ಕೆಲವೊಬ್ರು ತಮ್ಮ ಹೆಸರನ್ನು ಹೇಳ್ಕೊಲ್ಲೋ ಶೈಲೀನೂ ವಿಚಿತ್ರ ಇರ್ತದ.ಬಾಂಡ್ ಜೇಮ್ಸ್ ಬಾಂಡ್..
ಮತ್ತ  ಇನ್ನ ಕೆಲವೊಬ್ರನ್ನ ಕರಿಯೋದೂ ಅಷ್ಟೇ ಮಜಾ ಇರ್ತಾವ..
ನಮ್ಮ ಉತ್ತರ ಕರ್ನಾಟಕದ ಕಡೆ ಬಂದ್ರ ಭಾರಿ ಭಾರಿ ಹೆಸರ್ಲೆ ಕರೀತಾರ.ಏನೋ ಹೋಗಿ ಏನೋ ಆಗಿರ್ತಾವಾ…

ಎಂಥಾ ಛಂದ ಹೆಸರು ಸತ್ಯಜಿತ್ ಅನ್ನೋದು ಸತ್ಯಾ !! ಅಂತಾರ. ಸತ್ತೆನೋ.. ಅನ್ನೋಹಂಗ. ಪುರುಷೋತ್ತಮ -ಪುರ್ಯಾ ,ಅನಿರುದ್ಧ-ಅನ್ಯಾ (ಚೀಟಿಂಗ ..?),ಕಾತ್ಯಾಯಿನಿ -ಕಾತಿ !!,ಪವನ-ಪವ್ವ,ಪ್ರಶಾಂತ್ -ಪಚ್ಯಾ,ಮುರುಗೇಶ-ಮುರ್ಗೀ!!  ಹಿಂಗ ಹೇಳ್ಕೋತ ಹೋದ್ರ ಹಣಮಪ್ಪನ ಬಾಲದ ಗತೆ ಬೆಳೀತದ..

ಈ ಹೆಸರಿನ ಸಲವಾಗಿ ಎಷ್ಟೋ ಸರ್ತೆ ಮಜಾ ಮಜಾ ಪ್ರಸಂಗಗಳೂ ಆಗ್ತಾವ..

ನನ್ನ ಬಾಲ್ಯ ಸ್ನೇಹಿತ,ಅಗದೀ ಖಾಸ್ ಗೆಳ್ಯಾ ಪ್ರವೀಣ ದಂಡಿನ.ಅವನಿಗೆ ನನ್ನ ಎಲ್ಲ ದೊಸ್ತ್ರೂ ದಂಡ್ಯಾ  ದಂಡ್ಯಾ ಅಂತ ಕರಿಯೋವ್ರು.ನಾನೂ ಹಂಗ ಕರೀತಿದ್ದೆ. (ಈಗೂ ಕರೀತೆನಿ).ನಮ್ಮ ಧಾರ್ವಾಡ ಕಡೆ ಹಿಂಗ ಎಂಥ ಛಂದ ಹೆಸರೇ ಇರ್ಲಿ ಅದನ್ನ ಬರೋಬ್ಬರಿ ತುಂಡು ಮಾಡಿ “ಯಾ” ಹಚ್ಚಿ ಕರದ್ರನ ಸಮಾಧಾನ.ಅವ್ರಿಗೆ ಅಷ್ಟ ಅಲ್ಲ.. ಹಂಗ ಈ ರೀತಿ ಕರಸಿ  ಕೊಂಡ್ರನ.. ಕರಿಸಿ ಕೊಳ್ಳವ್ರಿಗೂ ಸಮಾಧಾನ ಮತ್ತ ಸಂತೋಷ. ಹೆಸರು ಇಟ್ಟ ಕೊಂಡದ್ದಕ್ಕ ಸಾರ್ಥಕ ಭಾವಾ..
ಇರಲಿ..ಮುಂದ ಹೊಗೊಣಂತ
ನಾನೂ ದಂಡ್ಯಾ ಅಂತ ಕರೀತಿದ್ದೆ.ಅಷ್ಟ ಅಲ್ಲ ನಮ್ಮನ್ಯಾಗೂ ದಂಡ್ಯಾ ಇಲ್ಲ  ದಂಡಿನ ಅನ್ನೋ ಹೆಸರ ಗೊತ್ತು. ಅವನದು ಅಷ್ಟಾ ಅಲ್ಲ, ನನ್ನ ಎಷ್ಟೋ  ಬ್ಯಾರೆ ದೊಸ್ತ್ರದ್ದೂ ನಾ ಕರ್ದದ್ದ ಹೆಸರು ಗೊತ್ತು..ಎಷ್ಟೋ ದಿವಸದ ತನಕ  ಅವನ ಹೆಸರ ಗೊತ್ತಿರಲಿಲ್ಲ ಅವ್ರಿಗೆ.ಗೊತ್ತಾದ ಕೂಡ್ಲೇ ಎಂಥಾ ಛಂದ  ಹೆಸರು ಅದ ಪ್ರವೀಣ ಅಂತ ಏನ್ ಕರೀತೀರೋ ಏನೋ ಅಂತ ಅನ್ನವ್ರು.. (ಅವ್ರ ಮನ್ಯಾಗ ನನಗ ಪ್ರೀತಿಯಿಂದ ಕಲ್ಲಣ್ಣ ಇಲ್ಲ ಹಣಮಂತ ಅಂತ ಕರೀತಾರಾ)

ಒಮ್ಮೆ ಏನಾತು ಅಂದ್ರ,ಒಂದು ಮುಂಜಾನೆ ಯಾವುದೋ ಒಂದು ಪುಸ್ತಕ ಬೇಕಾಗಿತ್ತು ನನಗ.ಅದಕ್ಕ ನನ್ನ ತಮ್ಮನ್ನ ಕಳ್ಸಿದೆ ಅವ್ನ ಮನೀಗೆ ತೊಗೊಂಡ್ ಬಾ ಹೋಗು ಅಂತ.ಇವ ಅವ್ರ ಮನೀಗೆ ಹೋಗಿ
“ದಂಡಿನ  ಇದ್ದಾನ್ರೀ..” ಅಂತ ಕೇಳಿದ.
ಒಮ್ಮಿಂದೊಮ್ಮಿಲೆ ನನ್ನ ತಮ್ಮನ ಮುಂದ ಮೂರು ಮಂದಿ ಅಕ್ಕಂದ್ರು ಒಬ್ಬ ಅಣ್ಣ,ಆಮೇಲೆ ಅವ್ರ ಅಪ್ಪಾಜೀನೂ  ಇರಬಹುದು ಬಂದು ನಿಂತು
“ನಿನಗ ಯಾವ ದಂಡಿನ ಬೇಕು ಹೇಳಪಾ ಈಗ” ಅಂದ ಕೂಡ್ಲೇ ಇವ ಕಕ್ಕಾವಿಕ್ಕಿಯಾಗಿ ಹೆದರಿ ಓದಿ ಬಂದಬಿಟ್ಟ.ಪಾಪ ಅಗದೀ ಸಣ್ಣವ ಇದ್ದ ನನ್ನ ತಮ್ಮ ಹರಿ ಆವಾಗ.
ಏನು ಮಾಡ್ಬೇಕು ಇನ್ನ ಇಷ್ಟ ಮಂದಿ ದೊಡ್ಡವರು ಬಂದ್ ನಿಂತ್ರ..?ಅವನಿಗೆ ಗೊತ್ತ ಇದ್ದದ್ದ ದಂಡಿನ ಇಲ್ಲ ದಂಡ್ಯಾ ಅನ್ನೋ ಹೆಸರು..
ಮುಂದ ಅವ್ರ ಮನೀಗೆ ಹೋದಾಗೊಮ್ಮೆ ಈ ಪ್ರಸಂಗ ಬರಬೇಕು ನಗೆ ಚಿಮ್ಮಬೇಕು..

ಮತ್ತೊಮ್ಮೆ ಏನ್ ಆತು ಅಂದ್ರಾ ,

ನಾನು ಸಾಲ್ಯಾಗ ಇದ್ದಾಗ ಮಸ್ತ ಸಂಧ್ಯಾವಂದನೆ ಮಾಡಿ(ಈಗೂ ಮಾಡ್ತೆನಿ ಯಾವಾಗರೇ ಒಮ್ಮೆ!)ಪಧ್ಧತ್ಶೀರ್ ನಾಮ,ಮುದ್ರ ಹಚ್ಕೊಂಡು ಹೊಗಾವ.ಆವಾಗ ಹಂಗ ಹೋಗೋ ಒಂದು ಹುರುಪೋ ಅಥವಾ ಹಂತಾ ಒಂದು ಪರಿಸರದಲ್ಲಿ ಇರ್ತಿದ್ದೆ ಮತ್ತ ಬೆಳೆದೆ ಅನ್ನೋದಕ್ಕೋ ಏನೋ ಗೊತ್ತಿಲ್ಲ..ವಟ್ಟ ಮಾರೀಮ್ಯಾಲೆ ನಾಮ,ಮುದ್ರ ಇರ..ಬೇಕು.ನನಗ ಸಾಲ್ಯಾಗ ಗೆಳ್ಯಾರೆಲ್ಲಾರೂ  ಕಲ್ಯಾ ಕಲ್ಯಾ ಅಂತಿದ್ರು..(ಈಗೂ ಅಂತಾರ..ಆದ್ರ ಶೀಕ್ಯಾ  ಅಂತ ಭಾಳ್ ಮಂದಿ ಅಂತಾರ)

ನನ್ನ ಇನ್ನೊಬ್ಬ ಖಾಸ್ ಗೆಳ್ಯಾ ಗಿರ್ಯ(ಗಿರೀಶ ಜೋಶಿ) ಅಲ್ಲೇ ಮನೀ ಹತ್ರ ಖಾಜೀ ಓಣಿ (ಮುಸಲರ ಓಣಿ) ಒಳಗ  ಇರ್ತಿದ್ದ.ಅಗದೀ ಎಡವಿ ಬಿದ್ರ ಅವ್ನ ಮನೀ.ಅಷ್ಟ ಹತ್ರ.ಹಗಲಲ್ಲ ಹೋಗ್ತಿದ್ದೆ.ಅವ ನನಗ ಕಲ್ಯಾ ಅಂತನ.. ಕರೀತಿದ್ದ.ರೂಢಿ ನೋಡ್ರಿ..ಅವ್ನ ಮನ್ಯಾಗೂ ನಾನು ಹಂಗ.. ಗೊತ್ತು. ಒಮ್ಮೆ ಅವ್ನ ಅಜ್ಜಿ ಬಂದಿದ್ರು ಅವ್ನ ಮನೀಗೆ.ನಾ ಹಗಲಲ್ಲ ಹೋದಾಗ ನೋಡ್ಯಾರ.ಮಾರೀಮ್ಯಾಲೆ ನಾಮ,ಮುದ್ರನೂ ಇರ್ತಿದ್ವೂ ನೋಡ್ಲಿಕ್ಕೆ ಗುಂಡ ಗುಂಡಕ ನೂ ಇದ್ದೆ,ಸ್ವಲ್ಪ ಛಂದನೂ ಇದ್ದೆ ಆವಾಗ..ಆದ್ರ ಹೆಸರು ಮಾತ್ರ ಕಲ್ಯಾ..!! ಪಾಪ ಒಂದೆರಡು ಸರ್ತೆ ನೋಡ್ಯಾರ ಕೇಳ್ಯಾರ ಸಮಾಧಾನ ಆಗಿಲ್ಲ.ಅದಕ್ಕ ತಡೀಲಾರ್ದ ಒಮ್ಮೆ ನಮ್ಮ ಗಿರ್ಯಾಗ

“ಅಲ್ಲೋ ಆ ಹುಡುಗ ನೋಡ್ಲಿಕ್ಕೆ ಬ್ರಾಹ್ಮಣರ ಗತೆ ಕಾಣ್ತಾನ ಕಲ್ಯಾ ಕಲ್ಯಾ ಅನ್ತೀರ್ಲಾ..? ಕಲ್ಲಪ್ಪ ಏನು ಅವ್ನ ಹೆಸರು..?ಅಂತ ಕೇಳ್ಯಾರ.
ಇವ ಬಿದ್ದ ಬಿದ್ದ ನಕ್ಕು ಎಲ್ಲ ಬಿಡಿಸಿ ಹೇಳ್ಯಾನ..
ಮರುದಿವ್ಸಾ ನನ್ನ ಮುಂದ ನಮ್ಮ ಟೋಳಿ ಮುಂದ ಹೇಳಿ ಬಿದ್ದ ಬಿದ್ದ ನಕ್ಕ.ನನಗ ಸಿಟ್ಟು ಬಂತು.ಇನ್ನ ಮುಂದ ನನ್ನನ್ನ ಎಲ್ಲರೂ ಶೀಕ್ಯಾ ಅಂತ ಕರೀಬೇಕು ಅಂತ ತಾಕೀತು ಮಾಡಿದೆ.. ಆವಾಗಿಂದ ನನಗ ಶೀಕ್ಯಾ ಅಂತ ಕರೀತಾರ..
ಹೆ ಹೆ ಹೆ ಹೆ ..

ಈ ಪ್ರಸಂಗ ಹಗಲಲ್ಲ ನೆನೆಸಿಕೊಂಡು ಜೋಕ್ ಮಾಡ್ತಿರ್ತೆವಿ ..ಈಗ ನನಗ ಪ್ರೀತೀಲೆ ಏನೇ ಹೆಸರು ಹಿಡಿದು ಕರದ್ರೂ ಛೊಲೋ ಅನಸ್ತದ.ನನ್ನ ಅಪ್ಪಾಜಿ ಮಹಾರಾಜ್ ಅಂತಾರ(ಅದಕ್ಕೂ ಒಂದು ಪ್ರಸಂಗ ಅದ),ಅಕ್ಕ ನನಗ ಅಪ್ಪಿ ಅಂತಾಳ,ಶ್ರೀಕಾಂತ,ಶೀಕ್ಯಾ,ಶಿಕ್ಕಿ,ಶ್ರೀ,ಶ್ರೀಕ್ಯಾ, ಕಲ್ಯಾ ಕಲಕೋಟಿ,ಶಿಂಕಾತ(ಚೈನೀಸ್), ಏನೆಲ್ಲಾ ಅಂತಾರ.ಏನೋ ಒಂಥರಾ ಖುಷಿ..

ನಿಮಗೂ ಹಿಂಗ ಹತ್ತು ಹಲವಾರು ಹೆಸರ್ಲೆ ಕರೀತಿರ್ಬೇಕ್ಲಾ..ಎಷ್ಟೋ ಹಿಂತಾ ಪ್ರಸಂಗಗಳು ನಡದಿರಬೇಕ್ಲಾ ..? ಹೇಳ್ರ್ಯಲಾ ನಮಗೂ..
ಹಿಂಗ,ಇಂಥ ಸಣ್ಣ ಸಣ್ಣ ಖುಷಿಯ ಪ್ರಸಂಗಗಳು ಬಿದ್ದು ಬಿದ್ದು ನಗಿಶ್ಕೋತ ಕಣ್ಣ ತುಂಬಾ ನೀರೂ ತರಸ್ತಾವಾ…

ಏನಂತೀರಿ..?

ನಿಮ್ಮ ಟಿಪ್ಪಣಿ ಬರೆಯಿರಿ