ಅಪ್ಪಾಜಿ.

ಫೆಬ್ರವರಿ 19, 2020

ಜಗತ್ತಿನಲ್ಲಿ ಯಾವ ವಿಷಯದಮೇಲೆ ಲೇಖಕರು,ಕವಿಗಳು,ಚಿತ್ರಕಾರರು ಬರೆದಿರುತ್ತಾರೆ ಎಂದು ಕೇಳಿದರೆ,ಅಲ್ಲಿ ಹೆಚ್ಚಾಗಿ ಬರುವುದು ಎರಡೇ ಉತ್ತರ ಒಂದು ತಾಯಿ ಹಾಗು ಪ್ರೀತಿ..ತಾಯಿಯಷ್ಟೇ ಮತ್ತೊಂದು ಜೀವ ನಿಸ್ವಾರ್ಥದಿಂದ ತನ್ನ ಮಕ್ಕಳಿಗೋಸ್ಕರ,ಮನೆಯವರಿಗೋಸ್ಕರ ಹಗಲಿರುಳು ಶ್ರಮ ಪಡುತ್ತಿದೆ ಎಂದರೆ ಅದು ನಮ್ಮೆಲ್ಲರ ತಂದೆಯವರು,ಅಪ್ಪಾಜಿ.

ಲಾಲಯೇತ್ ಪಂಚವರ್ಷಾಣಿ ದಶವರ್ಶಾಣಿ ತಾಡಯೇತ್ I
ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೆತ್ II

ಮೊದಲೈದು ವರ್ಷಗಳನ್ನು ಲಾಲಿಸಬೇಕು ,ಮುಂದಿನ ಹತ್ತು ವರ್ಷಗಳನ್ನು ತಪ್ಪಿದ್ದಲ್ಲಿ ತಿದ್ದಿ ,ಅಗತ್ಯವಿದ್ದರೆ ಹೊಡೆದು ಹೇಳಬೇಕು,ಹದಿನಾರನೇ ವರ್ಷಕ್ಕೆ ಬರುತ್ತಲೇ ಮಗನನ್ನು ಮಿತ್ರನಂತೆ ಕಾಣಬೇಕು.ಎಂದು ಒಂದು ಸುಭಾಷಿತವು ಹೇಳುತ್ತದೆ ..

ಈ ಮಾತನ್ನು ಅಕ್ಷರಸಹ ತಂದೆಯು ಪಾಲಿಸುತ್ತಾನೆ ಎಂದರೆ ಉತ್ಪ್ರೇಕ್ಷೆಯೇನಲ್ಲ ..

ನಮಗೆ ತಿಳುವಳಿಕೆ ಬರುವವರೆಗೆ ಮುದ್ದಿಸಿ,ಮಕ್ಕಳು ಕೆಟ್ಟ ದಾರಿ ಹಿಡಿಯಬಾರದೆಂದು ಬುಧ್ಧಿ ಹೇಳುತ್ತಾ ಮಂಡತನ ಮಾಡಿದರೆ ತನ್ನ ಹೃದಯ ಕಲ್ಲಾಗಿಸಿ,ತನ್ನದೇ ಅಂಶವನ್ನು ಹೊಡೆದು ತಿದ್ದಲು ಪ್ರಯತ್ನಿಸುವ ತಂದೆ,ಬೆಳೆಯುತ್ತಿರುವ ನಮಗೆ ವೈರಿಯ ಹಾಗೆ ಕಾಣುತ್ತಾನೆ..ತಾನು ವೈರಿ ಆಗುತ್ತಿರುವೆ ಎಂದು ಅವನಿಗೆ ಅರಿವಿದ್ದರೂ ತನ್ನ ಕರ್ತವ್ಯ ವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ,ಮಕ್ಕಳ ವ್ಯಕ್ತಿತ್ವ ರೂಪಿಸಲು ಕೆಲವೊಮ್ಮೆ ತನ್ನ ವ್ಯಕ್ತಿತ್ವದ ವ್ಯತಿರೇಕನೂ ಹೋಗುತ್ತಾನೆ..

ತನ್ನ ಮಕ್ಕಳ ವಿದ್ಯಾಭ್ಯಾಸ,ಉತ್ತಮ ಬೆಳವಣಿಗೆಗೆ,ಕುಟುಂಬದ ಸರ್ವತೋಮುಖ ಶ್ರೇಯಸ್ಸಿಗೆ ಯಾವುದೇ ರೀತಿಯ ಅಡಚಣೆ ಆಗದಿರಲೆಂದು ಎಲ್ಲಾ ರೀತಿಯ ಕಷ್ಟ ಪಟ್ಟು ತನ್ನೆಲ್ಲ ಸುಖಗಳನ್ನು ಬದಿಗಿಟ್ಟು ಶ್ರಮಿಸುವವನು ತಂದೆ.

ಪರ ಊರಿಗೆ ಹೋಗುವ ಸಂದರ್ಭದಲ್ಲಿ ಬಸ್ಸಿನ ಕಿಟಕಿಯಲಿ ಬಂದು “…ಇನ್ನೂ ನೂರು ರೂಪಾಯಿ ಇಟ್ಟುಕೊ ಬೇಕಾಗುತ್ತೆ ”ಎಂದು ಕೊಡುವುದು ನಮಗೆ ಆ ಸಮಯದಲ್ಲಿ ತುಂಬಾ ಅಸಹ್ಯ,ಮುಜುಗರ ತಂದರೂ ಪರಊರಿನಲ್ಲಿ ಆಗಬಹುದಾದ ಕಷ್ಟಗಳು ಅವನಿಗೆ ಮಾತ್ರ ಗೊತ್ತು .ಆ ಕಷ್ಟಗಳ ಅನುಭವ ಮಕ್ಕಳಿಗೆ ಆಗದಿರಲಿ ಎಂಬ ಕಳಕಳಿ.

ಅಂತಹ ಆ ಪುಣ್ಯಾತ್ಮನನ್ನೇ ಎಷ್ಟೋ ಬಾರಿ,ಅವನಿಗೆ ವ್ಯವಹಾರ ಜ್ಞ್ಯಾನ ಇಲ್ಲ,ಬುಧ್ಧಿ ಇಲ್ಲಾ,ಜನರ ಜೊತೆ ಹೇಗಿರಬೇಕೆಂಬುದೇ ಗೊತ್ತಿಲ್ಲ ಎಂದೆಲ್ಲ ಇತರರ ಮುಂದೆ,ಕೆಲಬಾರಿ ಅವನ ಮುಂದೆಯೇ ಮೊದಲಿಸುತ್ತಿರುತ್ತೇವೆ.ತನ್ನ ವ್ಯವಹಾರ ಜ್ಞ್ಯಾನ,ಬುಧ್ಧಿ ಉಪಯೋಗಿಯಿಸಿಯೇ ಅಲ್ಲವೇ ನಮ್ಮನ್ನು ಈ ಎತ್ತರಕ್ಕೆ ತಂದಿದ್ದು ಎಂಬ ಸತ್ಯವನ್ನೇ ಮರೆತಿರುತ್ತೇವೆ.

ಈಗಿನ youth ತಾವು ಧರಿಸುವ ಶರ್ಟ್ ಗಳ ಮೇಲೆ my dad is an ATM ಅಂತಾನೊ, ಅಥವಾ ‘DAD’banker by nature ಎಂಬ ಉಡಾಫೆ punch line ಇರುವುದನ್ನೋ ಸರ್ವೇಸಾಮಾನ್ಯವಾಗಿ ಕಾಣುತ್ತೇವೆ.ಆದರೆ ಆ ರೀತಿಯ banker ಆಗಲು ಆತ ಪಟ್ಟ ಕಷ್ಟ,ಮಾಡಿದ ತ್ಯಾಗಗಳ ಕನಿಶ್ಠ ಪರಿಜ್ನ್ಯಾನ ಇಲ್ಲದೇ ವರ್ತಿಸುವುದು ನಿಜಕ್ಕೂ ಆಘಾತಕಾರಿ..

ಅಪ್ಪಾಜಿ ಎಂದರೆ ಥಳಿಸುವ,ಗದರಿಸುವ ವ್ಯಕ್ತಿತ್ವ,ಅವನೊಬ್ಬ ನಿಷ್ಕರುಣಿ ಎಂಬ ಒಂದು ಸಾಮಾನ್ಯ ಮನೋಭಾವ ಮಕ್ಕಳಿಗೆ.ಆದರೆ ಅ ತಂದೆಯದು ವ್ಯಾಘ್ರಪ್ರೀತಿ,ಒಂದು ತ್ಯಾಗಮಯಿ ವ್ಯಕ್ತಿತ್ವ,ಹೃದಯದಲ್ಲಿ ದು:ಖ,ನೋವುಗಳಿದ್ದರೂ ತೋರ್ಪಡಿಸದೆ ಮುಗುಳ್ನಗುತ್ತ ನಮ್ಮಲ್ಲಿ ಧೈರ್ಯ,ಸ್ಪೂರ್ತಿ ಕೊಡುವವನು ಎಂದು ನಮ್ಮ ಮನ:ಪಟಲದಲ್ಲಿ ಬಂದಿರುವುದು ಕಡಿಮೆ.

ತಂದೆಯ ತ್ಯಾಗಮಯಿ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲಾಗದು.ತಂದೆ ಎಂದಿಗೂ ಮಹಾತ್ಮನೇ..

ಎಲ್ಲ ಪಿತೃಗಳಿಗೆ ಹಾಗು ಅವರ ನಿಸ್ವಾರ್ಥ ಜೀವನಕ್ಕೆ ಒಂದು ನಮನ ಹಾಗೂ ಈ ಚಿಕ್ಕ ಲೇಖನ ಅರ್ಪಣೆ.

*ಈ ಲೇಖನದ ಶೇಕಡಾ ೮೦ ಭಾಗ ಬರೆದ ಶ್ರೇಯ ನನ್ನ ತಮ್ಮ ಚಿIಹರೀಶನಿಗೆ ಸಲ್ಲುತ್ತದೆ.

ಹೆಸರಿನ ಗಮ್ಮತ್ತುಗಳು..

ಫೆಬ್ರವರಿ 19, 2020

ಹೆಸರು ಜೀವಿಗಳನ್ನು ಸರಳವಾಗಿ ಗುರುತಿಸಲು ಇರುವಂಥವವು.ಕೆಲವೊಂದು ಅತೀ ದೊಡ್ಡವು,ಕೆಲವೊಂದು ಅತೀ ಚಿಕ್ಕವು,ಕೆಲವೊಂದು ಸರಳ ಸುಂದರ ಹಾಗೂ ಕೆಲವೊಂದು ಅಷ್ಟೇ ಕ್ಲಿಷ್ಟವೂ ಸಹ.ಹಂಗ ಕೆಲವೊಂದು ಹಾಸ್ಯಾಸ್ಪದ ಅಂತನೂ ಅನಸ್ತಾವ..

ಆದರೆ ಏನೇ ಇರಲಿ..

ಮನುಷ್ಯನಿಗೆ ಅವನ ಹೆಸರು ಯಾವುದೇ ದೇಶ,ಭಾಷೆಯಲ್ಲೂ ಅತೀ ಸಂತೋಷ ನೀಡುವ ಪದ..ಅನ್ನೋದಂತೂ ಖರೆ.

ಎಲ್ಲ ಹೆಸರಿಗೂ ಒಂದೊಂದು ಅರ್ಥ,ಇತಿಹಾಸ ಇದ್ದೆ ಇರ್ತದ.ಹಿಂದೂಸ್ಥಾನ ಅಂದ್ರ ಹಿಂದೂಗಳು ಇರುವ ತಾಣ.ಮುರಾರಿ-ಮುರ ಎಂಬ ರಾಕ್ಷಸನನ್ನು ಕೊಂದವನು ಯಾರೋ ಅವನು(ಕೃಷ್ಣ)..ಹಿಂಗ ಹತ್ತು ಹಲವು.

ಕೆಲವೊಬ್ರು ತಮ್ಮ ಹೆಸರನ್ನು ಹೇಳ್ಕೊಲ್ಲೋ ಶೈಲೀನೂ ವಿಚಿತ್ರ ಇರ್ತದ.ಬಾಂಡ್ ಜೇಮ್ಸ್ ಬಾಂಡ್..
ಮತ್ತ  ಇನ್ನ ಕೆಲವೊಬ್ರನ್ನ ಕರಿಯೋದೂ ಅಷ್ಟೇ ಮಜಾ ಇರ್ತಾವ..
ನಮ್ಮ ಉತ್ತರ ಕರ್ನಾಟಕದ ಕಡೆ ಬಂದ್ರ ಭಾರಿ ಭಾರಿ ಹೆಸರ್ಲೆ ಕರೀತಾರ.ಏನೋ ಹೋಗಿ ಏನೋ ಆಗಿರ್ತಾವಾ…

ಎಂಥಾ ಛಂದ ಹೆಸರು ಸತ್ಯಜಿತ್ ಅನ್ನೋದು ಸತ್ಯಾ !! ಅಂತಾರ. ಸತ್ತೆನೋ.. ಅನ್ನೋಹಂಗ. ಪುರುಷೋತ್ತಮ -ಪುರ್ಯಾ ,ಅನಿರುದ್ಧ-ಅನ್ಯಾ (ಚೀಟಿಂಗ ..?),ಕಾತ್ಯಾಯಿನಿ -ಕಾತಿ !!,ಪವನ-ಪವ್ವ,ಪ್ರಶಾಂತ್ -ಪಚ್ಯಾ,ಮುರುಗೇಶ-ಮುರ್ಗೀ!!  ಹಿಂಗ ಹೇಳ್ಕೋತ ಹೋದ್ರ ಹಣಮಪ್ಪನ ಬಾಲದ ಗತೆ ಬೆಳೀತದ..

ಈ ಹೆಸರಿನ ಸಲವಾಗಿ ಎಷ್ಟೋ ಸರ್ತೆ ಮಜಾ ಮಜಾ ಪ್ರಸಂಗಗಳೂ ಆಗ್ತಾವ..

ನನ್ನ ಬಾಲ್ಯ ಸ್ನೇಹಿತ,ಅಗದೀ ಖಾಸ್ ಗೆಳ್ಯಾ ಪ್ರವೀಣ ದಂಡಿನ.ಅವನಿಗೆ ನನ್ನ ಎಲ್ಲ ದೊಸ್ತ್ರೂ ದಂಡ್ಯಾ  ದಂಡ್ಯಾ ಅಂತ ಕರಿಯೋವ್ರು.ನಾನೂ ಹಂಗ ಕರೀತಿದ್ದೆ. (ಈಗೂ ಕರೀತೆನಿ).ನಮ್ಮ ಧಾರ್ವಾಡ ಕಡೆ ಹಿಂಗ ಎಂಥ ಛಂದ ಹೆಸರೇ ಇರ್ಲಿ ಅದನ್ನ ಬರೋಬ್ಬರಿ ತುಂಡು ಮಾಡಿ “ಯಾ” ಹಚ್ಚಿ ಕರದ್ರನ ಸಮಾಧಾನ.ಅವ್ರಿಗೆ ಅಷ್ಟ ಅಲ್ಲ.. ಹಂಗ ಈ ರೀತಿ ಕರಸಿ  ಕೊಂಡ್ರನ.. ಕರಿಸಿ ಕೊಳ್ಳವ್ರಿಗೂ ಸಮಾಧಾನ ಮತ್ತ ಸಂತೋಷ. ಹೆಸರು ಇಟ್ಟ ಕೊಂಡದ್ದಕ್ಕ ಸಾರ್ಥಕ ಭಾವಾ..
ಇರಲಿ..ಮುಂದ ಹೊಗೊಣಂತ
ನಾನೂ ದಂಡ್ಯಾ ಅಂತ ಕರೀತಿದ್ದೆ.ಅಷ್ಟ ಅಲ್ಲ ನಮ್ಮನ್ಯಾಗೂ ದಂಡ್ಯಾ ಇಲ್ಲ  ದಂಡಿನ ಅನ್ನೋ ಹೆಸರ ಗೊತ್ತು. ಅವನದು ಅಷ್ಟಾ ಅಲ್ಲ, ನನ್ನ ಎಷ್ಟೋ  ಬ್ಯಾರೆ ದೊಸ್ತ್ರದ್ದೂ ನಾ ಕರ್ದದ್ದ ಹೆಸರು ಗೊತ್ತು..ಎಷ್ಟೋ ದಿವಸದ ತನಕ  ಅವನ ಹೆಸರ ಗೊತ್ತಿರಲಿಲ್ಲ ಅವ್ರಿಗೆ.ಗೊತ್ತಾದ ಕೂಡ್ಲೇ ಎಂಥಾ ಛಂದ  ಹೆಸರು ಅದ ಪ್ರವೀಣ ಅಂತ ಏನ್ ಕರೀತೀರೋ ಏನೋ ಅಂತ ಅನ್ನವ್ರು.. (ಅವ್ರ ಮನ್ಯಾಗ ನನಗ ಪ್ರೀತಿಯಿಂದ ಕಲ್ಲಣ್ಣ ಇಲ್ಲ ಹಣಮಂತ ಅಂತ ಕರೀತಾರಾ)

ಒಮ್ಮೆ ಏನಾತು ಅಂದ್ರ,ಒಂದು ಮುಂಜಾನೆ ಯಾವುದೋ ಒಂದು ಪುಸ್ತಕ ಬೇಕಾಗಿತ್ತು ನನಗ.ಅದಕ್ಕ ನನ್ನ ತಮ್ಮನ್ನ ಕಳ್ಸಿದೆ ಅವ್ನ ಮನೀಗೆ ತೊಗೊಂಡ್ ಬಾ ಹೋಗು ಅಂತ.ಇವ ಅವ್ರ ಮನೀಗೆ ಹೋಗಿ
“ದಂಡಿನ  ಇದ್ದಾನ್ರೀ..” ಅಂತ ಕೇಳಿದ.
ಒಮ್ಮಿಂದೊಮ್ಮಿಲೆ ನನ್ನ ತಮ್ಮನ ಮುಂದ ಮೂರು ಮಂದಿ ಅಕ್ಕಂದ್ರು ಒಬ್ಬ ಅಣ್ಣ,ಆಮೇಲೆ ಅವ್ರ ಅಪ್ಪಾಜೀನೂ  ಇರಬಹುದು ಬಂದು ನಿಂತು
“ನಿನಗ ಯಾವ ದಂಡಿನ ಬೇಕು ಹೇಳಪಾ ಈಗ” ಅಂದ ಕೂಡ್ಲೇ ಇವ ಕಕ್ಕಾವಿಕ್ಕಿಯಾಗಿ ಹೆದರಿ ಓದಿ ಬಂದಬಿಟ್ಟ.ಪಾಪ ಅಗದೀ ಸಣ್ಣವ ಇದ್ದ ನನ್ನ ತಮ್ಮ ಹರಿ ಆವಾಗ.
ಏನು ಮಾಡ್ಬೇಕು ಇನ್ನ ಇಷ್ಟ ಮಂದಿ ದೊಡ್ಡವರು ಬಂದ್ ನಿಂತ್ರ..?ಅವನಿಗೆ ಗೊತ್ತ ಇದ್ದದ್ದ ದಂಡಿನ ಇಲ್ಲ ದಂಡ್ಯಾ ಅನ್ನೋ ಹೆಸರು..
ಮುಂದ ಅವ್ರ ಮನೀಗೆ ಹೋದಾಗೊಮ್ಮೆ ಈ ಪ್ರಸಂಗ ಬರಬೇಕು ನಗೆ ಚಿಮ್ಮಬೇಕು..

ಮತ್ತೊಮ್ಮೆ ಏನ್ ಆತು ಅಂದ್ರಾ ,

ನಾನು ಸಾಲ್ಯಾಗ ಇದ್ದಾಗ ಮಸ್ತ ಸಂಧ್ಯಾವಂದನೆ ಮಾಡಿ(ಈಗೂ ಮಾಡ್ತೆನಿ ಯಾವಾಗರೇ ಒಮ್ಮೆ!)ಪಧ್ಧತ್ಶೀರ್ ನಾಮ,ಮುದ್ರ ಹಚ್ಕೊಂಡು ಹೊಗಾವ.ಆವಾಗ ಹಂಗ ಹೋಗೋ ಒಂದು ಹುರುಪೋ ಅಥವಾ ಹಂತಾ ಒಂದು ಪರಿಸರದಲ್ಲಿ ಇರ್ತಿದ್ದೆ ಮತ್ತ ಬೆಳೆದೆ ಅನ್ನೋದಕ್ಕೋ ಏನೋ ಗೊತ್ತಿಲ್ಲ..ವಟ್ಟ ಮಾರೀಮ್ಯಾಲೆ ನಾಮ,ಮುದ್ರ ಇರ..ಬೇಕು.ನನಗ ಸಾಲ್ಯಾಗ ಗೆಳ್ಯಾರೆಲ್ಲಾರೂ  ಕಲ್ಯಾ ಕಲ್ಯಾ ಅಂತಿದ್ರು..(ಈಗೂ ಅಂತಾರ..ಆದ್ರ ಶೀಕ್ಯಾ  ಅಂತ ಭಾಳ್ ಮಂದಿ ಅಂತಾರ)

ನನ್ನ ಇನ್ನೊಬ್ಬ ಖಾಸ್ ಗೆಳ್ಯಾ ಗಿರ್ಯ(ಗಿರೀಶ ಜೋಶಿ) ಅಲ್ಲೇ ಮನೀ ಹತ್ರ ಖಾಜೀ ಓಣಿ (ಮುಸಲರ ಓಣಿ) ಒಳಗ  ಇರ್ತಿದ್ದ.ಅಗದೀ ಎಡವಿ ಬಿದ್ರ ಅವ್ನ ಮನೀ.ಅಷ್ಟ ಹತ್ರ.ಹಗಲಲ್ಲ ಹೋಗ್ತಿದ್ದೆ.ಅವ ನನಗ ಕಲ್ಯಾ ಅಂತನ.. ಕರೀತಿದ್ದ.ರೂಢಿ ನೋಡ್ರಿ..ಅವ್ನ ಮನ್ಯಾಗೂ ನಾನು ಹಂಗ.. ಗೊತ್ತು. ಒಮ್ಮೆ ಅವ್ನ ಅಜ್ಜಿ ಬಂದಿದ್ರು ಅವ್ನ ಮನೀಗೆ.ನಾ ಹಗಲಲ್ಲ ಹೋದಾಗ ನೋಡ್ಯಾರ.ಮಾರೀಮ್ಯಾಲೆ ನಾಮ,ಮುದ್ರನೂ ಇರ್ತಿದ್ವೂ ನೋಡ್ಲಿಕ್ಕೆ ಗುಂಡ ಗುಂಡಕ ನೂ ಇದ್ದೆ,ಸ್ವಲ್ಪ ಛಂದನೂ ಇದ್ದೆ ಆವಾಗ..ಆದ್ರ ಹೆಸರು ಮಾತ್ರ ಕಲ್ಯಾ..!! ಪಾಪ ಒಂದೆರಡು ಸರ್ತೆ ನೋಡ್ಯಾರ ಕೇಳ್ಯಾರ ಸಮಾಧಾನ ಆಗಿಲ್ಲ.ಅದಕ್ಕ ತಡೀಲಾರ್ದ ಒಮ್ಮೆ ನಮ್ಮ ಗಿರ್ಯಾಗ

“ಅಲ್ಲೋ ಆ ಹುಡುಗ ನೋಡ್ಲಿಕ್ಕೆ ಬ್ರಾಹ್ಮಣರ ಗತೆ ಕಾಣ್ತಾನ ಕಲ್ಯಾ ಕಲ್ಯಾ ಅನ್ತೀರ್ಲಾ..? ಕಲ್ಲಪ್ಪ ಏನು ಅವ್ನ ಹೆಸರು..?ಅಂತ ಕೇಳ್ಯಾರ.
ಇವ ಬಿದ್ದ ಬಿದ್ದ ನಕ್ಕು ಎಲ್ಲ ಬಿಡಿಸಿ ಹೇಳ್ಯಾನ..
ಮರುದಿವ್ಸಾ ನನ್ನ ಮುಂದ ನಮ್ಮ ಟೋಳಿ ಮುಂದ ಹೇಳಿ ಬಿದ್ದ ಬಿದ್ದ ನಕ್ಕ.ನನಗ ಸಿಟ್ಟು ಬಂತು.ಇನ್ನ ಮುಂದ ನನ್ನನ್ನ ಎಲ್ಲರೂ ಶೀಕ್ಯಾ ಅಂತ ಕರೀಬೇಕು ಅಂತ ತಾಕೀತು ಮಾಡಿದೆ.. ಆವಾಗಿಂದ ನನಗ ಶೀಕ್ಯಾ ಅಂತ ಕರೀತಾರ..
ಹೆ ಹೆ ಹೆ ಹೆ ..

ಈ ಪ್ರಸಂಗ ಹಗಲಲ್ಲ ನೆನೆಸಿಕೊಂಡು ಜೋಕ್ ಮಾಡ್ತಿರ್ತೆವಿ ..ಈಗ ನನಗ ಪ್ರೀತೀಲೆ ಏನೇ ಹೆಸರು ಹಿಡಿದು ಕರದ್ರೂ ಛೊಲೋ ಅನಸ್ತದ.ನನ್ನ ಅಪ್ಪಾಜಿ ಮಹಾರಾಜ್ ಅಂತಾರ(ಅದಕ್ಕೂ ಒಂದು ಪ್ರಸಂಗ ಅದ),ಅಕ್ಕ ನನಗ ಅಪ್ಪಿ ಅಂತಾಳ,ಶ್ರೀಕಾಂತ,ಶೀಕ್ಯಾ,ಶಿಕ್ಕಿ,ಶ್ರೀ,ಶ್ರೀಕ್ಯಾ, ಕಲ್ಯಾ ಕಲಕೋಟಿ,ಶಿಂಕಾತ(ಚೈನೀಸ್), ಏನೆಲ್ಲಾ ಅಂತಾರ.ಏನೋ ಒಂಥರಾ ಖುಷಿ..

ನಿಮಗೂ ಹಿಂಗ ಹತ್ತು ಹಲವಾರು ಹೆಸರ್ಲೆ ಕರೀತಿರ್ಬೇಕ್ಲಾ..ಎಷ್ಟೋ ಹಿಂತಾ ಪ್ರಸಂಗಗಳು ನಡದಿರಬೇಕ್ಲಾ ..? ಹೇಳ್ರ್ಯಲಾ ನಮಗೂ..
ಹಿಂಗ,ಇಂಥ ಸಣ್ಣ ಸಣ್ಣ ಖುಷಿಯ ಪ್ರಸಂಗಗಳು ಬಿದ್ದು ಬಿದ್ದು ನಗಿಶ್ಕೋತ ಕಣ್ಣ ತುಂಬಾ ನೀರೂ ತರಸ್ತಾವಾ…

ಏನಂತೀರಿ..?

ಅಯ್ಯೋ ಕನ್ನಡವೇ,ಆಹಾ ಕನ್ನಡಿಗರೇ..

ಫೆಬ್ರವರಿ 19, 2020
ಭಾರತದಲ್ಲಿ ವಾಸಮಾಡುವವರು ಭಾರತೀಯರು,ಬಂಗಾಳದಲ್ಲಿ ಇರುವವರು ಬಂಗಾಳಿಗಳು,ಹಂಗ ತೆಲುಗರು,ಮಲ್ಲುಗಳು,ಮರಾಠಿಗರು,ತಮಿಳರು.ಕನ್ನಡಿಗರು..? ಈ ಶಬ್ದ ಯಾಕೋ ಅಷ್ಟು ಚಿರಪರಿಚಿತ ಅನಸಾಂಗೆ ಇಲ್ಲ..ಯಾಕಂದ್ರ ಅದನ್ನ ಬಳಸ ಬೇಕಾಧಂತಾವ್ರು ಬಳಸುವುದೇ ಇಲ್ಲಾ..ನಾನು ಕನ್ನಡಿಗ ಅಂತ ಹೇಳಿಕೊಳ್ಳಿಕ್ಕೆ ( ಎದಿ ಶಟಿಸಿ ಹೇಳೋ ಮಾತು ದೂರ ಉಳೀತು) ಏನೋ ಒಂಥರಾ ಮುಜುಗರ,ಕೀಳರಿಮೆ..
ಹೌದು ಕನ್ನಡಿಗನಾಗಿ ಈ ಮೇಲಿನ ಮಾತುಗಳನ್ನ ಹೇಳಲಿಕ್ಕೆ,ಬರೀಲಿಕ್ಕೆ ನನಗ ಭಾಳ ದುಃಖ ಆಗ್ಲಿಕತ್ತದ..ಆದ್ರ ಏನು ಮಾಡ್ಲಿ ಹೇಳಲೇ ಬೇಕು..ಯಾವುದೇ ವಕೀಲನಿಗೂ ಸುಳ್ಳು ಅಂತ ಸಾಬೀತು ಮಾಡಲಾಗದ ಸತ್ಯ ಇದು.. ಇದಕ್ಕೆ ಕಾರಣ ಇಲ್ಲಿ ವಾಸಮಾಡುವ ಜನರ ಪರಭಾಷೆಯ ಮೇಲಿರುವ ಅಭಿಮಾನ,ಮಾತೃಭಾಷೆಯ ಮೇಲಿರುವ ಅತಿಯಾದ ನಿರ್ಲಕ್ಶತನ..
ಮೆಕಾಲೆ ಎನ್ನುವ ಒಬ್ಬ ಆಂಗ್ಲ,ಭಾರತದೇಶವನ್ನೆಲ್ಲ ಸುತ್ತಿ ಬಂದು ಅವರ ಸರ್ಕಾರಕ್ಕೆ,ಇಲ್ಲಿ ಇರುವ ಜನರ ಸಂಸ್ಕೃತಿ,ಭಾಷೆ ಉಚ್ಚತಮವಾಗೆದ.ಎಲ್ಲೀತನಕಾ ಇವರಿಗೆ ನಮ್ಮ ಆಂಗ್ಲ ಭಾಷೆಯೇ ಉತ್ತಮ ನಮ್ಮ ಸಂಸ್ಕೃತಿಯೇ ಶ್ರೇಷ್ಠ ಅನ್ನುವ ಹಾಗೆ ಮಾಡುವದಿಲ್ಲವೋ ಅಲ್ಲೀ ತನಕಾ ಇವರನ್ನ ಆಳಲು ಸಾಧ್ಯಾ ಇಲ್ಲಾ ಅಂತ ವರದಿ ಒಪ್ಪಿಸಿದ.ಕ್ರಮೇಣ ಅವರು ಆ ರೀತಿ ಮಾಡಿದ್ರು ಮತ್ತ ಭಾರತವನ್ನ ಎಷ್ಟೋ ವರ್ಷ ಆಳಿದ್ದು ಈಗ ಇತಿಹಾಸ.ಆದ್ರ ಕರ್ನಾಟಕದಲ್ಲಿ ಮೆಕಾಲೆ ಆಗ್ಲಿ,ಆಂಗ್ಲರಾಗ್ಲಿ ಅಂಥಾ ಹರಸಾಹಸ ಮಾಡೋ ಸಮಸ್ಯೇನಾ ಇಲ್ಲಾ..ಹೌದು.. ಇವ್ರು ಬರ್ರಿಪ್ಪಾ ಬರ್ರಿ ನಿಮ್ಮ ಭಾಷೇನೇ ಉತ್ತಮ,ನಿಮ್ಮ ಸಂಸ್ಕೃತಿನೇ ಶ್ರೇಷ್ಠ ಅಂತಾ ಬೆನ್ನಿಗೆ ಬಿದ್ದು ಅನುಸರಿಸ್ತರಾ..
ಕನ್ನಡಿಗರ ಒಂದಿಷ್ಟು ಗುಣ ಮೆಚ್ಚಿ,ಹಾಡಿ ಹೊಗಳಲೇ ಬೇಕು..ಇವರು ಭಾರೀ ಅಂದ್ರ ಭಾರೀ ವಿನಮ್ರರು,ಹೃದಯ ವೈಶಾಲ್ಯತೆ ಉಳ್ಳವರು. ನೀರು ಬೇಕಾ..? ತೊಗೋ…ಜಾಗಾ ಬೇಕಾ..? ತೊಗೋ.. ಮತ್ತೇನು ಬೇಕ್ಪ್ರಿಪಾ ಅಂತ ಅಗದೀ ವಿನಮ್ರತೆಯಿಂದ ಕೇಳಿ ಕೊಡ್ತಾರ..ಮತ್ತ ಬೇರೆದವ್ರ ಜೊತೆ ಭೇದ-ಭಾವ ಇಲ್ಲದೇ ಅನುಸರಿಷ್ಕೊಂಡು ಹೋಗಾವ್ರು..ಮಹಾರಾಷ್ಟ್ರಕ್ಕೆ ಹೋದ್ಯಾ ಅಲ್ಲಿಯವರ ಗತೇ,ತಮಿಳರು ಸಿಕ್ರ ಅವರ ಗತೇ,ತೆಲುಗರು ಸಿಕ್ರ ಅವರ ಗತೇ,ಇನ್ನ ವಿದೇಶದಾವ್ರು ಸಿಕ್ರಂತೂ ಮುಗುದಾ ಹೋತು ಜೋಕುಮಾರನ ಗತೇ ಬಾಲಾ ಅಲ್ಯಾಡಿಷ್ಕೊಂಡು ಹೊಂಟಬಿಡ್ತಾರ..
ಕನ್ನಡದವರು ಯಾರಾರೆ ಸಿಕ್ರೋ ಇಲ್ಲೋ ಆಕಾಶದ ಕಡೆ ಇಲ್ಲಾ ನೆಲದ ಕಡೆ ಮಾರಿ ಮಾಡ್ಕೊಂಡು ಹೊಂಟ ಬಿಡೋದು.. ಅಪ್ಪಿ ತಪ್ಪಿ ಕಣ್ಣಿಗೆ ಕಣ್ಣು ಸಿಕ್ಕತು ಅಂದ್ರ ಇಂಗ್ಲಿಷ್ನ್ಯಾಗ ಮಾತಾಡಿ ಬೈ ಬೈ ಅಂದ ಬಿಡೋದು..ಹಿಂತಾ ಮಂದಿ ಹಗಲ್ನ್ಯಾಗ ದೀಪ ಹಚ್ಚಿ ಹುಡುಕಿದ್ರೂ ಸಿಗಾಂಗಿಲ್ಲ..
ಇದು ಇಲ್ಲಿಂದಾ ಬ್ಯಾರೇ ಕಡೆ ಹೊದಾವ್ರ ಕಥೀ ಆತು,ಇನ್ನ ಅಲ್ಲಿಂದಾ ಇಲ್ಲೇ ಬಂದಿರ್ತಾರಲ್ಲ..ಅವರಿಗಂತೂ ಹಬ್ಬೋ ಹಬ್ಬ..
ಎಲ್ಲಾ ಕಡೇನೂ ಅವರಿಗೆ ಮಣೆ.ಅವರ ಜೊತಿ ಅವರ ಭಾಷೆ ಕಲಿತು ಒಡನಾಡೋ ಜನ,ಹಿಂದಾ ಮುಂದಾ ಅಡ್ಯಾಡ್ಲಿಕ್ಕೆ ನಾಮುಂದಾ ತಾಮುಂದಾ ಅಂತಾ ಬರೋವ್ರಿಗೆ ಏನೂ ಕಮ್ಮಿ ಇಲ್ಲಾ..ಹಿಂಗ ಪರಿಸ್ಥಿತಿ ಅನುಕೂಲಕರ ಆಗಿರೋವಾಗ..ಹೊರಗಿಂದಾ ಬಂದೋವ್ರು,ಇದ್ದಷ್ಟೂ ವರ್ಷ ಕನ್ನಡ ಕಲಿಯೂದೂ ಇಲ್ಲಾ ,ತಿಳ್ಕೊಲ್ಲೂದೂ ಇಲ್ಲಾ ,ಮತ್ತ ಮ್ಯಾಲೆ ಹೆಮ್ಮೆ ಇಂದಾ ನಾನು ಇಷ್ಟು ವರ್ಷ ಇದ್ದೆ ನನಗ ಕಲಿಯೋ ಪ್ರಸಂಗಾನೆ ಬರ್ಲಿಲ್ಲ ಅಂತಾ ಅನ್ಕೊತಾ ನಕ್ಕೋತ ಅಡ್ಯಾಡ್ತಾರಾ..

ಅಯ್ಯೋ  ಕನ್ನಡವೇ  ಆಹಾ  ಕನ್ನಡಿಗರೇ ಅಂತ ನಿಜವಾದ ಕನ್ನಡಿಗರಿಗೆ ಅನಸದಾ ಬಿಟ್ಟೀತೇನು  ..?

ನಮ್ಮವರು,ನಮ್ಮತನ,ನಮ್ಮ ರಾಜ್ಯ,ನಮ್ಮ ಭಾಷೆ,ಭಾಷಿಕರು ಅನ್ನೋ ಅಭಿಮಾನ ಪುಡಿಗಾಸಿನಷ್ಟೂ ಇಲ್ಲಾ..ಕನ್ನಡ ರಾಜ್ಯೋತ್ಸವದ ಹಿಂದ ಮುಂದಾ ೨ ದಿವ್ಸಾ ಓಣಿ ಓಣ್ಯಾಗ,ಕಂಡ ಕಂಡಲ್ಲೇ, ಈ-ಪತ್ರ( ಈ-ಮೇಲ್)  ದಾಗ ನಮ್ಮ ಕನ್ನಡ,ನಮ್ಮ ಕನ್ನಡ,ನಾವು ಕನ್ನಡಿಗರು ಅಂತ ಗಂಟ್ಲಾ ಹರಕೋತ ಊರತುಂಬಾ ಕೆಂಪು ಹಳದಿ ಧ್ವಜಾ ಹಾರಿಸಿದ್ರು ಅಂದ್ರ ಮುಗದು ಹೋತು..ಮುಂದಿನ ವರ್ಷದ ತನಕ “ಕ”  ಅಂತಾ ಉಸುರು ಸುದಾಕ್ಕ ಎತ್ತಂಗಿಲ್ಲ..

ಜೆ ಪೀ ರಾಜರತ್ನಂ ಅವರು ಅಭಿಮಾನದಿಂದಾ ಒಂದು ಮಾತು ಹೇಳ್ತಾರ..
ನರಕಕ್ಕೆ ಇಳಿಸ್ಲಿ
ನಾಲಗೆ ಸೀಳಿಸ್ಲಿ
ಬಾಯಿ ಹೋಲಿಸಿ ಹಾಕಿದ್ರೂನೂ
ಮೂಗ್ನ್ಯಾಗ ಕನ್ನಡ ಪದವಾಡ್ತೇನಿ.. ಅಂತಾ
ಅವರೇನಾದ್ರೊ ಜೀವಂತಾ ಇದ್ದಿದ್ರಾ…ಇಲ್ಲಪಾ..ಅವರ ಅವಸ್ಥೆ ನನಗ ಕಲ್ಪಿಸಿಕೊಂಡು ಬರೀಲಿಕ್ಕೆ ಸಾಧ್ಯನೇ ಇಲ್ಲಾ..

ಪರ ಊರನ್ಯಾಗ,ಪರ ರಾಜ್ಯದಾಗ,ಪರದೇಶದಾಗ ಒಂದು ೩-೪ ಕನ್ನಡದ ಕುಟುಂಬಾ,ಗೆಳ್ಯಾರು,ಹೋಗೋದು-ಬರೋದು-ಇರೋದು,ಕೂಡಿ ಬಾಳೋದನ್ನ ಈ ಕಣ್ಣುಗಳು ಕಂಡೇ ಇಲ್ಲಾ..ಆದ್ರ ಬ್ಯಾರೇದಾವ್ರ ಜೊತಿ ಅವರ ಒಡನಾಟ ನೋಡ್ಬೇಕು..ಅಬ್ಬಬ್ಬ ಎನಂತೀರಿ..ಅಗದೀ ಗಳಸ್ಯಾ ಕಂಠಸ್ಯಾ ಸಂಭಂಧಾ..ಅವರವರು ಮಾತಾಡ್ಕೊಬೇಕಾದಾವಾಗ ನೋಡ್ಬೇಕು ನೀವು ಇನ್ನೂ..ಅವ್ರು ಏನು ಅಂತಾರ ಏನು ಮಾತಾಡ್ತಾರ ತಿಳೀತನ ಇರೂದಿಲ್ಲ..ಮಾರೀ ಮ್ಯಾಲೆ ಒಂದು ನಗು ಇಟ್ಕೊಂಡು ಅತ್ಲಾಗ ಒಮ್ಮೆ,ಇತ್ಲಾಗ ಒಮ್ಮೆ ನೋಡ್ಕೋತ,ಅವ್ರು ನಕ್ಕ ಕೂಡ್ಲೇ ಏನು ಮಹಾ ತಿಳಿದಾವ್ರಗತೆ  ಫಕ್ಕ ಅಂತ ನಕ್ಕು ಬಿಡೋದು..ಏನು ತಿಳೀತೋ ಏನು ಮಣ್ಣೋ..

ಅದ ನಮ್ಮ ಮಂದಿ ಅನ್ಕೊತಾ,ಅವರನ್ನ ಕಲೆ ಹಾಕಿ ಬಂದು ಗುಂಪು ಮಾಡಿ ಅವರ ಭಾವನೆ ಅಭಿರುಚಿಗೆ ಸ್ಪಂದಿಷ್ಕೊತಾ ಭಾಷೆ ಬೆಳಿಸೋ ವಿಚಾರನ..ಇಲ್ಲಾ.ಆದ್ರ ಬಂದು ಮಾತಂತೂ ಅಗದೀ ತಪ್ಪದೇ ಎಲ್ಲರೂ ಅಂತಾರಾ..
” ಕನ್ನಡದವರು ಹಿಂಗಲೇಪಾ..ಮಾತಾಡೋದೇ ಇಲ್ಲಾ..ನಾವು ನಮ್ಮವರು ಅನ್ನೋ ಸ್ವಾಭಿಮಾನಾನೇ  ಇಲ್ಲಾ ಇವ್ರಿಗೆ” ಅಂತ.
ಇಲ್ಲೇ ನಾವು ಸ್ವಲ್ಪಾ ವಿಚಾರಾ ಮಾಡಿದ್ರ,ಪ್ರತೀ ಕನ್ನಡಿಗ,ಮತ್ತೊಬ್ಬ ಕನ್ನಡಿಗನ ಪ್ರತಿ ಅನ್ನೋ ಮಾತಿದು ! ಅಂದ್ರಾ ನಾವು ಎಲ್ಲಾರೂ ಒಂದೇ ರೀತಿ ಅಂಧಂಗ..
ಅಬ್ಬಾ.!! ಒಂದ್ರಾಗರೇ ಸಹಮತ,ಏಕತೆ ಅದಲಾ..ಭಾಳ್ ಭಾಳ್ ಖುಷಿ ಆತು..

ಕನ್ನಡಿಗರೇ ಭಾಷಾಭಿಮಾನ   ಬೆಳಿಸಿಕೊಳ್ರಿ.ಕನ್ನಡ ಭಾಷೆ ಸರಳ ಸುಂದರ ಅರ್ಥಗರ್ಭಿತ.ಒಬ್ಬ ಕವಿ ಬರೀತಾರ..
“ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ ..ವಾಣಿಯ ವೀಣೆಯ ಸ್ವರಮಾಧುರ್ಯವೋ ಸುಮಧುರ ಸುಂದರ ನುಡಿಯೋ”ಅಂತಾ..ಸರಸ್ವತಿಯ ವೀಣೆಯ ನುಡಿಯಷ್ಟು ಸುಮಧುರ ಸುಂದರವಾದ ಈ ಭಾಷೆ,ಜೇನಿನಷ್ಟು ಸಿಹಿ,ಹಾಲಿನಷ್ಟು ಶುಭ್ರ,ಹಾಗೂ ಅಮೃತದಷ್ಟು ಶ್ರೇಷ್ಠ ವಾಗಿ ಕವಿಕಣ್ಣಿಗೆ ಕಾಣ್ಲಿಕತ್ತದ.
ಈ ಭಾಷೆದಾಗ ರಗಳೆ,ಕಾವ್ಯಗಳು,ಚಂಪೂ ಕಾವ್ಯಗಳು,ಪದ್ಯಗಳು,ಗದ್ಯಗಳು,ತ್ರಿಪದಿಗಳು,ಚತುಷ್ಪದಿಗಳು,ವಚನಗಳು,ದಾಸರ ಪದಗಳು  ಹಿಂಗಾ ಎಲ್ಲ ರೀತಿಯ ಸಾಹಿತ್ಯಾನೂ ಅವ.ಅದಕ್ಕೆ ಮತ್ತೊಬ್ಬ ಕವಿ (ಮಹಾಕವಿ ರನ್ನ ಇರಬೇಕು) “ಕನ್ನಡ ಕನ್ನಡ ಹಾಸವಿಗನ್ನಡ ಕನ್ನಡದಲಿ ಹರಿ ಬರೆಯುವನು,ಕನ್ನಡದಲಿ ಹರ ತಿರಿಯುವನು ಅಂತ..(ತಿರಿ=ಭಿಕ್ಷೆ) ..ಭಾಷೇನೆ ಇಷ್ಟು ಶ್ರೇಷ್ಠ ಅಂದ ಮ್ಯಾಲೆ ಆ ನಾಡಿನಾ ಸಂಸ್ಕೃತಿನೂ ಅಗದೀ ಶ್ರೇಷ್ಠ ಇರಲೇಬೇಕು..ಇದು ನಮ್ಮ ಸ್ವಂತದ್ದೇ ಆಗಿರುವಾಗಾ ಬೇರೆ ಭಾಷೆ,ಸಂಸ್ಕೃತಿ ಯದಕ್ಕ ಬೇಕ್ರಿಪಾ..?ಇದನ್ನ ಉಳಿಸಿ ಬೆಳೆಸೋ ಜವಾಬ್ದಾರಿ ತೊಗೋಬಾರ್ದಾ..?
ಎಷ್ಟು ಹೇಳಿದ್ರೂ ಕಡಿಮೀನೆರೀ,ಎಲ್ಲೀ ತನಕಾ ಕನ್ನಡಿಗರಿಗೆ ಸ್ವಾಭಿಮಾನ ಜಾಗೃತ ಆಗಾಂಗಿಲ್ಲೋ ಅಲ್ಲೀ ತನಕಾ.. ಹೇಳಿದ್ದೆಲ್ಲ ಬೋರಗಲ್ಲ ಮ್ಯಾಲೆ ನೀರು ಸುರುಧಂಗಾ..
ಕೊನೆಗೆ,
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ .. -ರಾಷ್ಟ್ರಕವಿ ಕುವೆಂಪು
ಜೈ ಕರ್ನಾಟಕ ಮಾತೆ..
*ನಾನು ಇಲ್ಲೆ ಕನ್ನಡದವರು ಅನ್ಯಭಾಷೆ ಕಲೀಬ್ಯಾಡ್ರಿ, ಬ್ಯಾರೆ ಸಂಸ್ಕೃತಿ ಬಗ್ಗೆ ತಿಳ್ಕೊಬ್ಯಾಡ್ರಿ .. ಅಂತ ಸರ್ವಥಾ ಅನ್ಲಿಕತ್ತಿಲ್ಲ.. ಆದ್ರಾ ಮಾತೃಭಾಷೆಯ ಬಗ್ಗೆ ಸ್ವಾಭಿಮಾನಿಗಳಾಗಿ,ಭಾಷೆ ಉಳಿಸಿ ಬೆಳೆಸೋಣು ಅನ್ನುವ ಉದ್ಯೇಶ ಮಾತ್ರ ತಿಳಿಸ್ಲಿಕತ್ತೆನಿ..ಕನ್ನಡಿಗನು ನೀನೆಂಬಾ ಅಭಿಮಾನವಿರಲಿ ಅಂತ ಮಾತ್ರಾ ಹೇಳಲಿಕತ್ತೆನಿ.. ಅನ್ಯಥಾ ಭಾವನೆ ಬೇಡಾ..

ಮರೆವು

ಫೆಬ್ರವರಿ 19, 2020
ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು..
ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು..ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು..
ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ..
ಹಿಂಗ ದಿನಾಲೂ ಎಷ್ಟೋ ಸರ್ತೆ ಮರೆವಿನ ಪ್ರಸಂಗಗಳನ್ನ ವ್ಯಾಖ್ಯಾನ ಮಾಡೋದನ್ನ ಕೇಳಿರ್ತೆವಿ,ಮಾಡಿರ್ತೆವಿ, ಅಲಾ.. ?
ಈ ಮರೆವು ಅನ್ನೋದು ಎನದಲಾ ಅದು ಒಂದು ರೀತಿ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿ ಬಿಟ್ಟದ.ಎಷ್ಟು ಅಂದ್ರ, ಆಧುನಿಕ
ಜಗತ್ನ್ಯಾಗ ಈ ಮರೆವನ್ನ ಗೆದ್ದವರು ಇಲ್ಲೇ ಇಲ್ಲ ಅನ್ನೋ ಅಷ್ಟು !.

ಮರೆವು ಅನ್ನೋದು ಒಂದು ಅತೀ ಪ್ರಭಾವೀ ಮತ್ತ ವಿವಿಧತೆ ಉಳ್ಳ ಒಂದು ವಿಚಾರ.
ಇದು ಮಾನವನಿಗೆ ಒಂದು ರೀತಿ ವರದಾನನೂ ಹೌದು ಮಹಶಾಪ ಅಂತನೂ ಹೇಳಬಹುದು..
ಅದ್ರೋಳಗೂ ನಾನಾ ಪ್ರಕಾರಗಳು ಪ್ರಸಂಗಗಳು ಅವ..ನಡೀರಿ ಒಂದೊಂದ ನೋಡೋಣoತ..

ಒಂದಿಷ್ಟು ಮಂದಿ ಇರ್ತಾರ,ಅವ್ರಿಗೆ ಏನು ಅಂದ್ರ ಏನೂ ನೆನಪನ್ಯಾಗ ಇರಾಂಗೆ ಇಲ್ಲ..ಓದಿದ್ದು,ಬರೆದಿದ್ದು,ಕೇಳಿದ್ದು,ಕಡೀಕ..ತಮ್ಮ
ಜೋತೀನ ಆದ ಘಟನೆನೂ ಮರ್ತು ಬಿಡ್ತಿರ್ತಾವ .ಅದರ ಸಲವಾಗಿ ಎಷ್ಟೋ ಜನ ಪ್ರಾಣಯಾಮ,ಗುಳಿಗಿ,ಚೂರ್ಣಾ ಅಥವಾ ನೆನಪು ಇಡಲು ಅನುಕೂಲ
ಆಗೋ ಅಂಥಾ ಅಭ್ಯಾಸಗಳನ್ನ ಮಾಡ್ತಿರ್ತಾರ .ಆದರೂ ಮರೀತಿರ್ತಾರ.ಇನ್ನ ಒಂದಿಷ್ಟು ಮಂದಿ ಇವನ್ನ ಮಾಡೋದೂ ಮರೀತಿರ್ತಾರ..!!
ಇವರೆಲ್ಲರೂ ಮಹಾ ಮರೆಗೂಳಿ ಗುಂಪಿಗೆ ಸೇರುವಂತಹವರು.
ಪಾಪ ,ಇಂಥವರು ಮಾನಸೀಕವಾಗಿ ಅದೆಷ್ಟು ಜರ್ಜರಿತ ಆಗಿರ್ತಾರೋ ಏನೋ.ಎಷ್ಟೊಕ್ಕೊಂದು ಕೀಳರಿಮೆ ಬೆಳಿಷ್ಕೊಂಡು ಬಿಟ್ತಿರ್ತಾರ ..

ಈ ಮುಂದಿನ ಗುಂಪಿನಾವ್ರ ಕಥೀನ ಬ್ಯಾರೆ,ಇವರದು ಹೆಂಗಪಾ ಅಂದ್ರ,ಮರೀಬೇಕು ಅಂದ್ರೂ ಆಗ್ತಿರೂದಿಲ್ಲ.ಮರೀಲೇಬೇಕು ಅಂತ ಹರಸಾಹಸ ಮಾಡ್ತಾರ,
ಜಿಗಿದ್ಯಾಡ್ತಾರ,ಗಜಂ ನಿಂದರ್ತಾರ,ಕಡೀಕ ಮರೀಬಹುದೋ ಏನೋ ಅಂತ ಅಂದ್ಕೊಂಡು ಒಂದು ಆಕರ್ಷಕ ದುಬಾರಿ ಬಾಟ್ಲ್ಯಾಗ ಬರೋ ಔಶಧಿಗೆ,ಶರಣಾಗ್ತಾರ..
ಹಾಂ ಬರೋಬ್ಬರಿ ಊಹೆ ಮಾಡಿದ್ರಿ,ಇವ್ರು ಜೀವನದಲ್ಲೇ ಅಸಫಲರಾದ್ವಿ ಅಂತ ಅಂದ್ಕೊಳ್ಳಾವ್ರು..ಮುಖ್ಯವಾಗಿ ಪ್ರೀತಿ ಮಾಡಿದವ್ರು,ಜೀವನದ ಪ್ರಮುಖ ಘಟ್ಟಗಳಲ್ಲಿ
ತಪ್ಪು ತೀರ್ಪು ತೊಗೊಂಡಾವ್ರು,ಅಗದೀ ಖಾಸ್ ಜನರನ್ನ ಶಾಶ್ವತವಾಗಿ ಕಳಕೊಂಡು ಅವರ ನೆನಪು ಮರೀಬೇಕನ್ನವ್ರು ಇತ್ಯಾದಿ ಇತ್ಯಾದಿ..
ನಾ ನಿಂಗೆ ಸಿಗಲಾssರೆ…. ಅಂತ ಮರೆವು ಇವರನ್ನ ನೋಡಿ ಹಾಡ್ಕೋತಿರ್ತದಾ..

ಇನ್ನ ಮುಂದ ಬರೋವ್ರು “ಇಚ್ಛಾ ಮರೆವಿ” ಗಳು.ಅಂದ್ರ ತಮ್ಮ ಸ್ವಂತ ಇಚ್ಛಾ ಬಲದಿಂದ ಮರೆಯುವವರು ಮತ್ತು ಒಮ್ಮಿಂದೊಮ್ಮಿಲೆ ತಮಗೆ ಬೇಕಾದಾವಾಗ
ಮರೆವಿನ ಕವಚ ಭೇದಿಸಿ ಇಣುಕು ಹಾಕಿ ಸ್ವಲ್ಪ ಅಡ್ಯಾಡಿ ಹೊಗಾವ್ರು.ಎಷ್ಟೋ ದಿವ್ಸಾ ಯಾರ ಉಸಾಬರೀಗೂ ಹೋಗ್ದನಾ, ತಮ್ಮ ಪೂರ್ತೆಕ್ಕ ತಾವಿದ್ದು,

ಜನರ ಮನಃ ಪಟಲದಿಂದ ಮರೆತವರಂತಾಗ್ಲಿಕತ್ತೆವಿ ಅಂತ ಅನಿಸಿದ್ ಕೂಡ್ಲೇನಾ, ಧಿಡಿಲ್ ಅಂತ ಕರೆ ಮಾಡಿ,ಇಲ್ಲಾ ಸಂದೇಶ ಕಳ್ಸಿ,ಅಥವಾ ಮನೀ ಒಳಗ
ಎದುರು ಬಂದು ನಿಂತು ” ಎನ್ರಿಪಾ ಮರತ್ರಿ ಏನು ನಮ್ಮನ್ನ ಅಂತ ದಬಾಯಿಸೋವ್ರು”ಇಂಥಾ ಮಂದಿ ಭಾರೀ ಕಿಲಾಡಿಗಳು.

ಇನ್ನ ಇದರ್ದಾ ಸಮಾನಾಂತರ ಹಾದಿಯೊಳಗ ಸಿಗೋ ಜನಾನೂ ಇದ್ದರ,

ಅವರು ಹೆಂಗಪಾ ಅಂದ್ರ ತಾವು ವಿದೇಶಕ್ಕ ಹೊಂಟಾಗ,ತಮ್ಮ ಮದ್ವಿ ನಿಶ್ಚಯ ಆದಾಗ,ಮಗು ಹುಟ್ಟಿದಾಗ,ಮನೀ ಕಟ್ಟಿ ಗೃಹ ಪ್ರವೇಶ ಮಾಡ್ಬೇಕಾದಾವಾಗ,
ಅಂದ್ರ ವಟ್ಟ ಖುಷಿ ಸುದ್ದಿ ಇದ್ದಾಗ ಅದನ್ನ ಹೇಳ್ಕೊಲ್ಲಿಕ್ಕೆ ಬೇಕಲ್ಲ ..ಇನ್ನ ತಾವು ಅತೀ ದು:ಖದಾಗ ಇದ್ದಾಗ,ಕಷ್ಟದಾಗ ಇದ್ದಾಗ
ಅಥವಾ ಸಹಾಯ ಬೇಕಾದವಾಗ ಅಥವಾ ಜನ ನಮ್ಮನ್ನ ನಗಣ್ಯ ಮಾಡ್ಲಿಕತ್ತಾರ ಅಂತ ಅಂದ್ಕೊಂಡು ನೆನಪು ಮಾಡ್ಕೊಳ್ಳವ್ರುದ್ದು ಮತ್ತೊಂದು ಗುಂಪು..
ಇವರನ್ನ ಸೋಗಲಾಡಿ ಮರೆವವರು ಅಂತ ಅನ್ನಬಹುದೇನೋ..

ಇಲ್ಲೇ ನಾವು ಇನ್ನೊಂದು ಗುಂಪು ಸೇರಿಸಬಹುದು,ಹೊಡ್ತ ಬಿದ್ದು,ಮಾನಸಿಕ ಆಘಾತ ಆಗಿ,ಅಥವಾ ಇನ್ಯಾದೋ ಕಾರಣಕ್ಕ ನೆನಪಿನ ಶಕ್ತಿ ಕಳ್ಕೊಂಡು
ಮರೆವಿನ ಛಾಯಾಛತ್ರದಲ್ಲಿ ಕೆಲದಿನ ಇಲ್ಲಾ ಜೀವನ ಪೂರ್ತಿ ಆಸರೆ ಪಡೆಯುವವರು.ಇದ ಗುಂಪನ್ಯಾಗನ.. ನಮ್ಮ ಘಜಿನಿ ಮತ್ತ ಹುಚ್ಚ ಇಬ್ರೂ ಬರ್ತಾರಾ..

ಇನ್ನ ಮರೆವಿನ ಪ್ರಕಾರಗಳಲ್ಲಿ ಅತೀ ಶೀಘ್ರದಲ್ಲಿ ಬೆಳೀಲಿಕತ್ತಾವ್ರು ಯಾರಪ್ಪ ಅಂದ್ರ, ಮರೆಯೋದು ಅನ್ನೋದನ್ನ ಒಂದು ರೀತಿ ಗೌರವ ಮತ್ತ ಪ್ರತಿಷ್ಥೆ ವಿಚಾರ

ಅಂತ ಅಂದ್ಕೊಂಡಾವ್ರುದ್ದು..!! ಹಾಂ ಖರೇನಾ..ಈಗೀಗ ಮರೆಯೋದು ಒಂದು ಪ್ರತಿಷ್ಥೆ ಮಾತೇ ಆಗೇದ..
ಮೊದಲನೇ ಗುಂಪಿನವರು ಇವರನ್ನ ನೋಡಿ ಅದೆಷ್ಟ್ ಸಂಕಟ ಪಡ್ತಿರ್ತಾರೋ ಏನೋ,ಪಾಪಾ..
ಒಂದಿಷ್ಟು ತಿಂಗ್ಳಾ ಮದ್ಲೆಕ್ಕ ಏನಾತಪಾ ಅಂದ್ರ ನನ್ನ ಗೆಳ್ಯಾನ ಮದ್ವಿ ಇತ್ತು,ಅದು ಮುಗದು ಒಂದು ಸ್ವಲ್ಪ ದಿವ್ಸ ಆದಮ್ಯಾಲೆ,ನನ್ನ ಗೆಳತಿ ಒಬ್ಬಾಕಿ ಸಂದೇಶ ಕಳ್ಸಿ
“ಎನಲೇ ನಾನು ಮರೀತೇನಿ ಅಂತ ಗೊತ್ತಿದ್ರೂ ನೀವು ಯಾಕ ನನಗ ಅವ್ನ ಮದ್ವಿ ಬಗ್ಗೆ ನೆನಪಿಸ್ಲಿಲ್ಲ,ನಾನು ನಿಮ್ಮ ಸಲವಾಗಿ ಮದ್ವಿ ತಪ್ಪಿಶಿಕೊಂಡೆ,
ಎಂಥಾ ಗೆಳ್ಯಾರ್ಲೇ ನೀವು” ಅಂತ ಅಂದ್ಲು ..ಅಬ್ಬಾ ಭಲೇ ಮಗಳೇ ,ಭೇಷ್ .. ಅಂದೆ..
ಹಿಂಗ ಈ ಗುಂಪನ್ಯಾಗ ಇಂಥಾ ಭಾಳಷ್ಟು ಮಂದಿ ಬರ್ತಾರ,ನಾನು ಇಲ್ಲೆ ಬರಿಯೋದ್ರಕ್ಕಿಂತಾನೂ ಹೆಚ್ಚಗೀ ನಿಮ್ಮ ಅನುಭವಕ್ಕ.. ರಗಡ ಬಂದಿರ್ತಾವ ಅಂತ ಅಂದ್ಕೊಂಡು ಬಿಡ್ಲಿಕತ್ತೆನಿ..

ಹಿಂಗ ಈ ಮರೆವು ಅನ್ನೋದು ಎನದಲಾ ಅದು ಒಂದು ರೀತಿ ಕೈಗೆ ಸಿಗದ ಮಾಯೆ, ಒಣ ಪ್ರತಿಷ್ಥೆ,ಬೆಂಬಿಡದ ಭೂತ ಅನ್ನೋ ಏನೇನೋ ಅವತರಾಗಳನ್ನ ಎತ್ತೆದ..
ಎತ್ಲಿಕತ್ತದ..ಎತ್ತಿ ಮೆರೀಲಿಕತ್ತದ.. ಇದಕ್ಕೆ ಯಾವುದೇ ಸಮಯದಲ್ಲಿಯೂ ಔಷಧೀನೆ ಇಲ್ಲಾ..ಇದು ತನ್ನ ಲೀಲೆಗಳಲ್ಲಿ ನಗೆ ಬುಗ್ಗೆ ಗಳನ್ನ ಚಿಮುಕಿಸಿದಾಗ ನಕ್ಕು,
ಅಸಮಧಾನದ ಉಗಿಕೆಂಡಗಳನ್ನ ನುಂಗಿಸಿದಾಗ ತಂಪ ನೀರು ಕುಡದು..ಮರೀಚಿಕೆಯಾಗಿ ಕಾಡಿದಾಗ,ನೆರಳಿನ ಗತೆ ಕೈಗೆ ಸಿಗದೇ ಇದ್ದಾಗ,,
ಬೆನ್ನು ಹತ್ತದೇ ಇರಲಿಕ್ಕೆ ಪ್ರಯತ್ನ ಮಾಡ್ಬೇಕಷ್ಟ..

**ಇಷ್ಟೆಲ್ಲಾ ಓದಿ ಮೆಚ್ಚುಗೆ ಸೂಚಿಸೋದನ್ನ ಮರೀಬ್ಯಾಡ್ರಿಪಾ..

ನಾನು ಮತ್ತು ನನ್ನ ಮನಸ್ಸು

ಫೆಬ್ರವರಿ 19, 2020

ಈ ವಿಷಯದ ಬಗ್ಗೆ ಪೀಠಿಕೆ ಹಾಕೊ ಹಂತಾದ್ದು ಏನೂ ಇಲ್ಲ.ಈಗ ಬರೀಲಿಕ್ಕೆ ಹೊರಟಿದ್ದು ಅಹಂಕಾರದ ಮೂಲಪದ ನಾನು ಮತ್ತು ನಮ್ಮೆಲ್ಲರಲ್ಲಿ ಏಳುವ ವಿಚಾರಗಳ ಆಗರವಾದ ಮನಸ್ಸಿನ ಬಗ್ಗೆ.ಮನಸ್ಸನ್ನು ಭೋರ್ಗರೆಯುತ್ತಿರುವ ಸಾಗರಕ್ಕೆ ಹೋಲಿಸುವುದೇ ಸೂಕ್ತ,ಅಂಬುಧಿಯ ಅಲೆಯಂತೆ ಮನಸ್ಸು.

ಒಂದು ತಿಂಗಳ ಹಿಂದ ನನ್ನ ಮಿತ್ರನ ಮದ್ವಿಗೆ ಬೆಂಗಳೂರಿಗೆ ಹೋದಾಗ ಅಲ್ಲೆ ನಮ್ಮ ವಿನ್ಯಾ (ವಿನಯ ಹುಬ್ಳಿ ) ಒಂದು ಪ್ರಶ್ನೆ ಕೇಳಿದ.. ಲೇ ಶೀಕ್ಯಾ ನೀನು ಮತ್ತ ನಿನ್ನ ಮನಸ್ಸು ಎರಡೂ ಒಂದೇ ಎನಲೇ? ನಾ ಪಟಕ್ಕನೆ ಅಗದೀ.. ನಾನು ಮತ್ತ ನನ್ನ ಮನಸ್ಸು ಎರಡೂ ಒಂದೇ ಅಂದೆ.ಅದಕ್ಕ ಅವ ನಕ್ಕ ನಾನೂ ನಕ್ಕೆ.. ಯದಕ್ಕ ನಕ್ವಿ ಗೊತ್ತಿಲ್ಲಾ.ಆಮೇಲೆ ವಿಷಯಾಂತರ ಆತು ಮಾತುಗಳು ಎಲ್ಲೆಲ್ಲೋ ಹೋದುವು.ಆದ್ರ ಆ ಪ್ರಶ್ನೆ ನನ್ನ ತಲ್ಯಾಗ ಕುತ್ತು ಹೊರಳ್ಯಾಡ್ಲಿಕತ್ತು.ಒಂದು ಸರ್ತೆ ಹೌದು ಎರಡೂ ಒಂದೇ,ಇನ್ನೊಮ್ಮೆ ಇಲ್ಲಾ ಏರಡೂ ಬ್ಯಾರೆ ಬ್ಯಾರೆ ಅಂತ,ಮತ್ತೊಮ್ಮೆ ಕೆಲ ಸಂಧರ್ಭದಾಗ ಮಾತ್ರ ಎರಡೂ ಬ್ಯಾರೆ ಬ್ಯಾರೆ ಅನಸ್ಲಿಕತ್ತು.

ಮನಸ್ಸು ನನ್ನೊಳಗೆ ಇರ್ತದ ಅಂದ್ರ ಅದು ಬ್ಯಾರೆ ಹೆಂಗ ಆತು?ಅದು ಬ್ಯಾರೆ ಅಲ್ಲಾ ಅಂದ್ರ ನಾನು ಇಲ್ಲೇ ಕುತ್ತಿರ್ತೆನಿ ಅದು ಎಲ್ಲೆಲ್ಲೋ ಅಲೀತಿರ್ತದ್ಲ?ಅದು ಅಲೀಲಿಕತ್ತಾಗ ನನಗೆ ಭೌತಿಕ ಅಸ್ತಿತ್ವನೇ ಇರಂಗಿಲ್ಲ.ಹಂಗಾದ್ರ ಮಾನಸ್ನ್ಯಾಗ ನಾ ಇದ್ದೇನೇನು?ಮನಸ್ಸು ಹುಚ್ಚು ಕುದುರೀಗತೆ ಅದನ್ನ ನಮ್ಮ ಹಿಡಿತದಾಗ ಇಟ್ಕೊಬೇಕು ಅಂತ ಅಂತಾರಲ್ಲ ಅದೇನು?ನನ್ನೊಳಗೆ ಮನಸ್ಸು ಅದ ಏನು?ಈ ಎಲ್ಲ ವಿಚಾರಗಳು ಬಂದು ಅಲ್ಲೋಲಕಲ್ಲೋಲ ಆಗ್ಲಿಕತ್ತು.ಇವು ನಡೀಲಿಕತ್ತಿದ್ದು ಮಾನಸ್ನ್ಯಾಗ ..!ಆದ್ರ ಅದಕ್ಕ ಗೊತ್ತಿಲ್ಲಾ ನಾನು ಎಲ್ಲೆ ಇದ್ದೆನಿ?ನನ್ನೊಳಗೆ ಏನೇನು ಅವ ಅಂತ..ಈಗ ಏನು ಮಾಡೋದು ಪ್ರಶ್ನೆ ಬಿಡ್ಲಿಕ್ಕೂ ಆಗ್ವಲ್ತು,ಬರೋಬ್ಬರಿ ಉತ್ತರಾನೂ ಸಿಗವಲ್ತು.ಅಬ್ಬಬ್ಬ ದೇವರೇ ಏನು ಮಾಡೀಯೋ ಮಹರಾಯ,ಏನೇನು ಮಾಡೀಪ್ಪಾ?
ಕಡೀಕ ಒಂದು ದಾರೀಯಿಂದ ಹೋಗ್ಬೇಕು ಅಂತ ನಿರ್ಧಾರ ಮಾಡಿದೆ.ಮದ್ಲೆಕ್ಕ ನಾನು ಮತ್ತ ಮನಸ್ಸು ಎರಡೂ ಬ್ಯಾರೆ ಬ್ಯಾರೆ ಅನ್ನೋ ದಾರಿ,ಎರಡನೆದ್ದು ಎರಡೂ ಒಂದೇ ಅಂತ ಹೋಗೋದು.ಅದರಿಂದ ಉತ್ತರ ಹುಡುಕಲಿಕ್ಕೆ ಸರಳ ಆಗಬಹುದೋ ಏನೋ?ಸರಿ ಪ್ರಯಾಣ ಅಂತು ಚಾಲೂ ಮಾಡಿದೆ.

ಮದ್ಲೆಕ್ಕ ನಾನು..ನಾನು ಅಂದ್ರ ಏನು?ಮತ್ತೊಂದು ಪ್ರಶ್ನೆ ಎತ್ತು.ಉತ್ತರ ನಾನು ನಾನೇ..ಅಂದ್ರ ಒಬ್ಬ ವ್ಯಕ್ತಿ ತನ್ನನ್ನು ತಾನು ಸಂಬೋಧಿಸಲು ಬಳಸುವ ಪದ ಅಂತ ನನ್ನ ವ್ಯಾಖ್ಯೆ.ಹಂಗಾದ್ರ ಅದರೊಳಗೆ ಏನೇನು ಬರ್ತಾವ?ಪಂಚೇಂದ್ರಿಯಗಳು,ಹೃದಯ,ಮೆದುಳು ಮತ್ತು ದೇಹದ ಎಲ್ಲ ಭಾಗಗಳು.ಸರಿ..

ಇನ್ನು ಮನಸ್ಸು..ಅಂದ್ರ?ಭೌತಿಕ ಅಸ್ತಿತ್ವವಿಲ್ಲದ ಬಂಧನ ಮುಕ್ತವಾಗಿ ವಿಹರಿಸುವ ನಿರ್ದಿಷ್ಟ ಗುರಿ ಗತಿ ಇಲ್ಲದ ಒಂದು ಸ್ಥಿತಿ.ಇದು ನಮ್ಮ ಮೆದುಳಿನಲ್ಲಿ ನಡೆಯುವ ಒಂದು ಅಗೋಚರ ಕ್ರಿಯೆ.

ಇಷ್ಟೆಲ್ಲಾ ಆದಮ್ಯಾಲೆ ಸ್ಪಲ್ಪ ಸ್ಪಷ್ಟ ಆಗ್ಲಿಕತ್ತು.ನನ್ನಲ್ಲಿ ಮೆದುಳು ಅದ,ಮನಸ್ಸು ಮೆದುಳಿನಲ್ಲಿ ನಡೆಯುವ ಒಂದು ಅಗೋಚರ ಕ್ರಿಯೆ ಅದಕ್ಕೆ.. ನಾನು ಮತ್ತ ಮನಸ್ಸು ಎರಡೂ ಒಂದೇ.ಒಂದು ಸರಳ ಸಮೀಕರಣ ಮಾಡಿ ಸೂತ್ರ ಕಂಡು ಹಿಡಿದ ಖುಷಿ ಏನೋ ಆತು,ಆದ್ರ ಉತ್ತರದಲ್ಲಿ ಏನೋ ಒಂಥರಾ ಅಪೂರ್ಣತೆ ಕಾಣ್ಲಿಕತ್ತು.ಮನಸ್ಸು ನನ್ನ ಜೊತೆಗೆ ಇದ್ದರೂ ಕೂಡ ಅದು ಒಂದು ಸ್ವತಂತ್ರ ಶಕ್ತಿ ಅಂತ ಭಾವನೆ.ಅದರ ಕಾರ್ಯವ್ಯಾಪ್ತೀನೇ ಬ್ಯಾರೆ.ಅದು ಊಹಾತೀತ.ಅದು ನನ್ನನ್ನು ನಡೆಸುತ್ತಿರುವ ಒಂದು ಶಕ್ತಿ.ಒಮ್ಮೊಮ್ಮೆ ಅದರ ವೇಗ ಸಾಮಾನ್ಯ ಮತ್ತು ಸರಾಸರಿಗಿಂತ ಭಾಳ ಭಾಳ ಜಾಸ್ತಿ ಆಗ್ತದ.ಕೆಲವೊಮ್ಮೆ ಸಾಮಾನ್ಯಕ್ಕಿಂತ ಕೆಳಗಡೆ ಇರ್ತದ.ಅದರ ವಿಚಾರಗಳು ಸಮುದ್ರದಲ್ಲಿ ಏಳುವ ಅಲೆಗಳಂತೆ ನಿದ್ರೂದನ ಇಲ್ಲಾ,ಹೆಚ್ಗಿ ಕಮ್ಮಿ ಆಕ್ಕೊತನ ಇರ್ತಾವ.ನಿಂತಾಗ ಕುತ್ತಾಗ ಕಡೀಕ ಮಲ್ಕೊಂಡಾಗ ಸಹ.ಇದೇ ಕಾರಣಕ್ಕೆ ಮನಸ್ಸು ನನಗಿಂತ ಬ್ಯಾರೆ ಅನಸ್ತದ.ಅನಸ್ತದ ಅಷ್ಟ ಆದರೆ ಇಲ್ಲಾ.ಅದಕ್ಕೇ ಎಲ್ಲೆಲ್ಲೋ ಹೋಗುವ ಮನಸ್ಸಿಗೆ ಕಡಿವಾಣ ಹಾಕಿ ಅದನ್ನ ಹಿಡಿತದಲ್ಲಿ ಇಟ್ಕೋಬೇಕು ಅನ್ನೋದು ಅದರಿಂದನ ನಾನು ಮತ್ತ ಮನಸ್ಸು ಒಂದ ಆಗ್ತಾವ.

ಆದರೂ ಮನಸ್ಸು ಒಂದು ಗೊಂದಲಮಯವಾದ ಆಳಕ್ಕೆ ಹೋದಷ್ಟೂ ಅನಂತ ಪ್ರಶ್ನೆಗಳನ್ನು ಗರಿಗೆದರಿಸುವ ವಿಷಯ.ಆದರೂ ಇಲ್ಲೆ ತಕ್ಕ ಪೂರ್ತೆಕ್ಕ ಒಂದು ಸಮಾಧಾನಕರ ಉತ್ತರ ಕಂಡುಕೊಂಡೇನಿ ಅಂತ ಭಾವನೆ.ನನಗೆ ಅನಿಸಿದ್ದನ್ನ ನಿರ್ದಿಷ್ಟವಾಗಿ ಪ್ರಸ್ತಾಪಿಸೇನಿ.ಮುಕ್ತವಾದ ಮನಸ್ಸಿನಿಂದ ನಿಮ್ಮ ಅನಿಸಿಕೆಗಳನ್ನ ಸೇರಸ್ರಿ.

ಚಕ್ರ ಚಕ್ರ ಚಕ್ರ…

ಫೆಬ್ರವರಿ 19, 2020

೧೯೯೮ ಫೆಬ್ರುವರಿ ೧೬ ರ ದಿನ.ಒಬ್ಬ ತಕ್ಕಮಟ್ಟಿಗೆ ಕಟ್ಟುಮಸ್ತಾದ,ಚಿಗುರು ಮೀಸೆಯ ಹುಡುಗ ಒಂದು ಸಾಲ್ಯಾಗ ಕಾಲಾಗಿಂದ ಎರಡೂ ಕೈ ಹಾಕಿ ಕಿವಿ ಹಿಡ್ಕೊಂಡು ಕಕ್ಕಾವಿಕ್ಕಿಯಾಗಿ ಕಪಾಳದಿಂದ ಹರಿಯುತ್ತಿರುವ ಕಣ್ಣೀರುಗಳ ನಡುವೆ ಒಂದೇ ಸಮನೆ ಇನ್ನೊಮ್ಮೆ ಎಂದೂ ಮಾಡಾಂಗಿಲ್ಲ, ನನ್ನ ತಪ್ಪು ಆತು ಬಿಟ್ಟು ಬಿಡ್ರಿ ಅಂತ ಹಗಲಲ್ಲ ಕೇಳ್ಕೊಳ್ಳಿ ಕತ್ತಿದ್ದ.ಅವನ ಗೆಳೆಯರು ಕಿಟಕಿಯಿಂದ ಇಣುಕಿ ಇಣುಕಿ ನೋಡ್ಲಿಕತ್ತಿದ್ರು..ಎಲ್ಲರ ಮುಖದ ಮ್ಯಾಲೆ ಒಂದು ತರಹದ ಹೆದರ್ಕಿ.ಆ ಆಫೀಸರ್ ನಿನ್ನ ಅಪ್ಪಾಜಿಗೆ ಹೇಳತೇನಿ,ಪೊಲೀಸರಿಗೆ ಕೊಡ್ತೆನಿ, ನಿನ್ನ ಸಾಲಿ ಬಿಟ್ಟು ಹೊರಗ ಹಾಕಿಸ್ತೇನಿ ಅಂತ ಹೆದರಸ್ಲಿಕತ್ತಿದ್ದ .ಕಡೀಕ ಯಾರು ಹುರಿದುಂಬಿಸಿ ಆ ಕೆಲಸಾ ಮಾಡ್ಲಿಕ್ಕೆ ಕಳಸಿದ್ದರೋ ಅವರೇ ಅಧಿಕಾರಿಗಳಿಗೆ ವಿನಂತಿ ಮಾಡ್ಕೊಂಡು ಬಿಡಿಸಿ ಕರ್ಕೊಂಡು ಬಂದ್ರು. ಹೊರಗಡೆ ಬಂದ್ರೂ ಬಿಕ್ಕಳಿಸಿ ಅಳೋದು ಮುಗೀವಲ್ತು.ಏಳೆಂಟು ಗೆಳೆಯರು ಇದ್ರು ಸಮಾಧಾನ ಮಾಡಿ ಆ ಜಾಗಾ ಖಾಲಿ ಮಾಡಿದ್ರು.

ಈ ಘಟನೆ ನಡೆದದ್ದು ಕ ಈ ಬೋರ್ಡ್ಸ ಪ್ರಾಥಮಿಕ ಶಾಲೆ ಮಾಳಮಡ್ದಿ ಧಾರವಾಡದಲ್ಲಿ .ಅವತ್ತ ಇದ್ದದ್ದು ಲೋಕಸಭೆಯ ಸಾರ್ವತ್ರಿಕ ಚುನಾವಣೆ .ಆ ಹುಡುಗಾ ಮತಾ ಹಾಕ್ಲಿಕ್ಕೆ ಹೋಗಿ ಸಿಕ್ಕಿ ಹಾಕ್ಕೊಂಡಿದ್ದ .
ಅವಾ ಯಾರಂದ್ರಿ ..?
ನಾನೇ ..!ಶ್ರೀಕಾಂತ ಕಲಕೋಟಿ ..
ನಿಮ್ಮ ಪ್ರೀತಿಯ ಕಲ್ಯಾ..ಶೀಕ್ಯಾ ..

ಹೌದು ನಾನೇ ..ಅವತ್ತ ನನ್ನ ಅಗದೀ ಖಾಸ ಗೆಳ್ಯಾನ ಮಾಮಾ ಹುರುಪು ಹಾಕಿ ಕಳ್ಸಿದ್ರು .ಅವರಿಬ್ಬರ ಹೆಸರು ನಮಗ ಇಲ್ಲೆ ಬ್ಯಾಡಾ ,ಮತ್ತ ಯಾರಿಗೆ ಮತ ಅದೂ ಬ್ಯಾಡಾ.ಇನ್ನೂ ಹದಿನೈದು ವರ್ಷ ಆವಾಗ ಅದು ಎಂಥ ಮಹಾಪರಾಧ ಅಂತ ನಂಗೇನ್ ಗೊತ್ತು .ಖಬರೇ ಇರಲಿಲ್ಲ .ಅವರಿಗೆ ಸಂಶಯ ಬಂದು ಹಿಡಿದಾಗ ಹೇದರ್ಕೀನೂ ಆಗ್ಲಿಲ್ಲ ..!ಒಂದು ಹತ್ತು ಹದಿನೈದು ನಿಮಿಷ ಇಟ್ಕೊಂಡು ಬೈದು ಬಿಡ್ತಾರ ಅಂತ ಮಾಡಿದ್ದೆ .ಊಹೂಂ ..ಹಂತಾ ಮಾತೇ ಇಲ್ಲಾ.ಆವಾಗ ಚಾಲೂ ಆತು ನೋಡ್ರಿ ಢವ ಢವ ಗುಡು ಗುಡು ಎಲ್ಲಾ.ಗಂಗಾ ಭಾಗೀರಥಿ ಹರದೇ ಬಿಟ್ರು.ಆಮೇಲೆ ಎಷ್ಟೋ ವರ್ಷ ಆದಮ್ಯಾಲೆ ತಿಳೀತು ನಿಯಮ ಮುರಿಯುವುದು ಅಪರಾಧವಲ್ಲ ಆದ್ರ ಸಿಕ್ಕಿಹಾಕ್ಕೊಳ್ಳೋದು ಅಪರಾಧ ಅಂತ !

ಅವತ್ತೇ ಅಂದ್ಕೊಂಡೆ ಇನ್ನೆಂದೂ ಮತಾ ಹಾಕಾಂಗಿಲ್ಲ ಅಂತ.ಅದು ಅವತ್ತಿನ ಮಟ್ಟಿಗೆಯ ನಿರ್ಧಾರ ಆಗಿರಲಿಲ್ಲ .ಮುಂದ ಯಾವುದೇ ಚುನಾವಣೆ ಬಂದ್ರ ,ಆ ದಿವಸ ಬಂದ್ರ ನನ್ನ ನಿರ್ಧಾರ ಗಟ್ಟಿ ಆಗ್ತಿತ್ತು .ಬಹುಶ ಹೆದರ್ಕೀಲೆ ಇರಬಹುದು.ಮುಂದ ಆರು ವರ್ಷದ ಮ್ಯಾಲೆ ಚುನಾವಣಾ ಗುರುತಿನ ಚೀಟಿ ಮಾಡ್ಸಿದೆ.ಗುರುತಿಗೆ ಇರ್ಲಿ ಅಂತ.ಆದ್ರ ಮತದಾನ ಮಾಡೋ ಗಟ್ಟಿ ನಿರ್ಧಾರ ಬರಲೇ ಇಲ್ಲ.

ಈಗ ಸ್ವಲ್ಪ ತಿಂಗಳಗಳ ಹಿಂದ ಒಂದು ಜಾಹೀರಾತು ನೋಡಿದೆ. ಜಾಗೋರೇ.. ಅಂತ. ನಾ ಎದ್ದೆ !ಖರೇನ .. ಮತದಾನದ ಬಗ್ಗೆ ಸ್ವಲ್ಪ ಆಳವಾಗಿ ವಿಚಾರ ಮಾಡಿದೆ.ಅದು ನಮ್ಮ ಹಕ್ಕು ಅಷ್ಟೇ ಅಲ್ಲ ಕರ್ತವ್ಯ ಸಹ ಹೌದು.ಸರಿ ನಿರ್ಧಾರ ಆತು ಈ ಸರ್ತೆ ಮತಾ ಹಾಕೊದೇ ಅಂತ.ಹತ್ತು ಹನ್ನೆರಡು ವರ್ಷದ ಹಿಂದ ವಯಸ್ಸಿಗೆ ಮುಂಚೆ ಮಾತಾ ಹಾಕೋದು ಎಂತಹ ಅಪರಾಧ ಅಂತ ಅರಿವು ಆಗಿತ್ತೋ ,ಅದೇ ಈಗ ಮತ ಹಾಕೋ ವಯಸ್ಸು ಆದಮ್ಯಾಲೆ ಹಾಕದೇ ಇರೋದು ಅದಕ್ಕೂ ದೊಡ್ಡ ಅಪರಾಧ ಅಂತ ಅನಸ್ತು.

ಇನ್ನು ಮತ ಯಾರಿಗೆ ಹಾಕೋದು?ನಾವು ಭಾಳ ಮಂದಿ ಅನ್ಕೊತೇವಿ ಏನು ಆಗೋದು ಅದ ಮತ ಹಾಕೋದ್ರಿಂದ ?ಭ್ರಷ್ಟಾಚಾರ ನಿಂದರ್ತದ ಏನು? ನಮ್ಮ ದೇಶಾನೂ ಬ್ಯಾರೆ ದೇಶಗಳ ಗತೆ ಮುಂದವರೀತದ ಏನು?ನಮ್ಮ ರಾಜಕಾರಣಿಗಳು ಏನು ಮಾಡವ್ರು ಇದ್ದಾರ ಅನ್ತೆಲ್ಲಾ .ಯಾವುನೋ ಒಬ್ಬ ಹಣ್ಣ ಹಣ್ಣ ಮುದುಕ,ಅಶಕ್ತ ,ದುರ್ಬಲ ಆಡಳಿತಗಾರ,ಅನಕ್ಷರಸ್ಥ ರಾಜಕಾರಣಿಗೆ ನನ್ನ ಮತ ಚಲಾಯಿಸಿ ಅದರ ಮತ್ತ ನನ್ನ ಕಿಮ್ಮತ್ತು ಕಳ್ಕೊಲ್ಲಿಕ್ಕೆ ಮನಸ್ಸಿಲ್ಲ ಅಂತ.ತಪ್ಪು..ನೀವು ಮತ ಹಾಕಿದವ ಗೆದ್ದು ಬರಲೇ ಬೇಕು ಅಂತ ಏನೂ ಇಲ್ಲಲಾ .ಬರೋಬ್ಬರಿ ಪರಾಂಬರಿಸಿ ಅಕ್ಷರಸ್ಥ ,ಯುವ ರಾಜಕಾರಣಿಗೆ ಮತ ಹಾಕಬಹುದಲ್ಲ?ಅಷ್ಟಂತೂ ನಾವು ಬುದ್ಧಿವಂತರಿದ್ದೇವಿ ಅಲಾ? ನಿಮ್ಮ ಹಂಗ ಎಷ್ಟೋ ಜನಾ ವಿಚಾರ ಮಾಡಿ ಅವನಿಗೇ ಮತ ಹಾಕಿದ್ರ ಗೆದ್ದು ಬರಬಹುದು.ಮತದಾನ ಗುಪ್ತವಾಗಿರ್ಬೇಕು ಆದ್ರ ನಿಮ್ಮ ವಿಚಾರಗಳಿಗೆ ಗೌಪ್ಯತೆ ಇಲ್ಲ .ಸಮನಸ್ಕರ ಹತ್ರ ಮಾತಾಡಿ ಅವರದೂ ಮನಃಪರಿವರ್ತನೆ ಮಾಡಬಹುದಲ್ಲ.

ಇಷ್ಟೆಲ್ಲಾ ಓದಿ ತಿಳ್ಕೊಂಡವರು ಆದಮ್ಯಾಲೆ ಸ್ವಂತ ವಿಚಾರ ಶಕ್ತಿ ಇದ್ದಮ್ಯಾಲೇನೂ ನಾವು ನಮ್ಮ ಮತ ಹಾಕುವ ಹಕ್ಕು ಚಲಾಯಿಸಲಿಲ್ಲ ಅಂದ್ರ ಯಾವುದೇ ರಾಜಕಾರಣಿ ಆಗಲಿ ,ಸರ್ಕಾರಿ ಅಧಿಕಾರಿ ಆಗಲಿ ಇಲ್ಲ ಸರ್ಕಾರಿ ನೌಕರನಿಗಾಗಲಿ ದೂರುವ ಹಕ್ಕೂ ಇರುವುದಿಲ್ಲ.ಒಂದು ವೇಳೆ ನಾವು ಮತ ಚಲಾಯಿಸಲಿಲ್ಲ ಅಂದ್ರ ಅನಕ್ಷರಸ್ಥರು ,ತಿಳುವಳಿಕೆ ಇಲ್ಲದವರು ,ರೊಕ್ಕ ಇಸ್ಕೊಂಡು ಮತ ಹಾಕಿ ತಮ್ಮಂಥವರನ್ನೇ ಆರಿಸಿ ತರ್ತಾರ .ಮದ್ಲೆಕ್ಕ ನಾವು ನಮ್ಮ ಕರ್ತವ್ಯ ಬರೋಬ್ಬರಿ ಮಾಡೋನಂತ ಆಮೇಲೆ ಬೇರೆದವರ ಕಡೆಯಿಂದ ನಿರೀಕ್ಷೆ ಮಾಡೋನು.

ಇನ್ನು ಈ ಬ್ಲಾಗನ ಶೀರ್ಷಿಕೆ ಬಗ್ಗೆ ಒಂದು ಮಾತು ,ನಾವು ಸಣ್ಣವರು ಇದ್ದಾಗ ಚುನಾವಣೆ ಸಮಯಕ್ಕೆ ತ್ರಿಚಕ್ರ ವಾಹನದ ಮ್ಯಾಲೆ ಬಂದು ಪ್ರಚಾರ ಮತ್ತ ಉಮ್ಮೆದುವಾರನ ಪ್ರತಿ(ಪಾಂಪ್ಲೆಟ)ಕೊಡ್ತಿದ್ರು. ನಾವು ಬೆನ್ನು ಹತ್ತಿ ಹೋಗಿ ಇಸ್ಕೊಂಡು ಬರತಿದ್ವಿ ಅದರ ಹಿಂದ ಗಣೀತ ಮಾಡ್ತಿದ್ವಿ .ಮತ್ತ ಆ ವಾಹನದವ್ರು ದೊಡ್ಡ ದೊಡ್ಡ ಧ್ವನಿವರ್ಧಕದಲ್ಲಿ ವದರ್ಕೊತ ಬರ್ತಿದ್ರು.
ಕಮಲ ಕಮಲ ಕಮಲ ಕಮಲಕ್ಕೆ ಮತಾ ದೇಶಕ್ಕೆ ಹಿತ
ಹಸ್ತ ಹಸ್ತ ಹಸ್ತ ಹಸ್ತಕ್ಕೆ ಮತ ದೇಶಕ್ಕೆ ಹಿತ
ಹಂಗನ..
ಚಕ್ರ ಚಕ್ರ ಚಕ್ರ ……

ಚಕ್ರ ಅನ್ನೋದು ಆಗಿನ ಒಂದು ಪಕ್ಷದ ಚಿಹ್ನೆ .ಆದ್ರ ನಾ ಇಲ್ಲೆ ಕಮಲ ಮತ್ತ ಹಸ್ತ ಬಿಟ್ಟು ಚಕ್ರನ ಯಾಕ ತೊಗೊಂಡೆ ಅಂದ್ರ ಚಕ್ರ ಪ್ರಗತಿಯ ಸಂಕೇತ.
ಏನಂತೀರಿ ಚಕ್ರ ಆಗೋಣಲ್ಲ?
ನಾನು ಈ ಸರ್ತೆ ನನ್ನ ಹಕ್ಕು ಚಲಾಯಿಸ್ತೆನಿ ನೀವು?

*ಇದು ಮತ ಹಾಕದೇ ಇರುವವರಿಗೆ ಮಾತ್ರ.

ಎಷ್ಟು ನಗ್ತಿ ನಗು.

ಫೆಬ್ರವರಿ 19, 2020

ಎಷ್ಟು ನಗ್ತಿ ನಗು ಮಗನ ..ಆಮೇಲೆ ನೋಡ್ಕೊತೆನಿ ಅಂತ ಸಿಟ್ಟಿಗೆದ್ದು ಹೇಳಲಿಕತ್ತೆನಿ ಅಂದ್ಕೊಂಡ್ರಿ ಏನು…?ಹ ಹ ಹಾ ಇಲ್ಲ ಹಂಗೇನೂ ಇಲ್ಲ..೨೦೦೭ ಅಕ್ಟೋಬರ್ ಬೆಂಗಳೂರಿನ ನಮ್ಮ ಐ ಎಫ್ ಬಿ ಆಫೀಸ್ ಕ್ಯಾಂಟೀನ್ ನ್ಯಾಗ ನಾನು ಮತ್ತ ನನ್ನ ಗೆಳ್ಯಾ ವಿಜ್ಯಾ (ವಿಜಯ ಕುಲಕರ್ಣಿ)ಏನೇನೋ ಮಾತಾಡ್ಕೊತ ಕುತ್ತಾಗ ಒಂದು ನಾಟಕದ ಪ್ರಸಂಗ ಹೇಳಿದ, ಬಿದ್ದು ಬಿದ್ದು ನಕ್ವಿ..

ಲೇ ಶೀಕ್ಯಾ ಯಾವುದರೆ ನಾಟಕಾ ನೋಡೀ ಏನ್ಲೇ ಅಂದ?

ಇಲ್ಲ ಅಂದೆ.

ಒಂದೂ ನೋಡಿಲ್ಲ ಏನ್ಲೇ

ಇಲ್ಲೋಲೆ ಅಂದೆ..

ಆದ್ರ ನಾವು ಸಾಲಿನ್ಯಾಗ ಒಂದು ನಾಟಕಾ ಮಾಡಿದ್ವಿ ಒಂಭತ್ತೋ ಎನು ಹತ್ತನೆತ್ತದಾಗ ಇದ್ದಾಗ ..ಅದು ಒಂದು ಸಂಸ್ಕೃತ ನಾಟಕ. ಹೆಸರು ನೆನಪಿಲ್ಲ ಈಗ. ನನ್ನದು ಒಂದು ಚಿಕ್ಕ ಪಾತ್ರ ಇತ್ತು. ಹಾಲು ಮಾರುವವನದ್ದು ! ಅಷ್ಟೆ ಅಂದೆ.

ಚಿಂದೋಡಿ ಲೀಲಾ ಅವರ ‘ಪೊಲೀಸನ ಮಗಳು’ ಭಾಳ ಪ್ರಸಿದ್ಧಿ ಆಗಿತ್ತು. ಆದ್ರ ಎಂದೂ ನೋಡ್ಬೇಕು ಅಂತ ಅನಸ್ಲೇ ಇಲ್ಲ..ಯಾಕ ಗೊತ್ತಿಲ್ಲ..ಗೆಳೆಯಾರು ಎಲ್ಲಾರು ಕೂಡಿ ಸಿನೆಮಾಕ್ಕೆ ಹೋಗ್ತಿದ್ವಿ ನಾಟಕಾ ಎಂದೂ ಹೋಗಿಲ್ಲ ಅಂದೆ..
ಸರಿ ಅವತ್ತ ನಿರ್ಣಯ ಆತು ಅಲ್ಲೇ.ವಾರಾಂತ್ಯ ನಾಟಕ ನೋಡ್ಲಿಕ್ಕೆ ಹೋಗೋದು ಅಂತ.
ಶನಿವಾರ ಮಧ್ಯಾಹ್ನ ೨-೩೦ ರ ಆಟ. ಮೆಜೆಸ್ಟಿಕ್ ನ ಗುಬ್ಬಿ ವೀರಣ್ಣ ಸಭಾಗೃಹದಲ್ಲಿ.ಅದರ ಹೆಸರು ಎಷ್ಟು ನಗ್ತಿ ನಗು..ಚಿಂದೋಡಿ ಕಲಾ ಸಂಘದವರ ನಾಟಕ.ನನ್ನ ಮೊದಲ ನಾಟಕ ನೋಡಿದ ಅನುಭವ.ಹೊರಗಡೆ ಚಿಂದೋಡಿ ಲೀಲಾ ಅವರೇ ಕುಳಿತಿದ್ರು..

ನಾಟಕ ಒಂದು ಸುಸ್ವಾಗತ ಹಾಡಿನ ಜೊತೆ ಶುರುವಾಯಿತು .ಒಂದು ಕೌಟುಂಬಿಕ ನಾಟಕ.ಅದರ ಕಥೆ ಹೇಳುವುದು ನನ್ನ ಉದ್ದೇಶವಲ್ಲ.ಆದರೆ ಪಾತ್ರಗಳ ಬಗ್ಗೆ ನಾಟಕದ ಬಗ್ಗೆ ಹೇಳಲೇ ಬೇಕು.ಈಗ ಒಂದೂವರೆ ವರ್ಷದ ನಂತರ ನನಗೆ ಯಾವ ಪಾತ್ರಧಾರಿಗಳ ಹೆಸರೂ ನೆನಪಿಲ್ಲ.ಆದರೆ ಆ ಪಾತ್ರಗಳ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ.ಎಷ್ಟು ನೈಜ ಅಭಿನಯ ಅದು.ಅದಕ್ಕೆ ತಕ್ಕ ಹಾಗೆ ಹಾಸ್ಯ,ಮಧುರವಾದ ಸಂಗೀತ,ನೃತ್ಯ ಎಲ್ಲವೂ ಇದ್ದವು.ಸನ್ನಿವೇಶಕ್ಕೆ ತಕ್ಕ ಹಾಗೆ ಬೇರೆ ಬೇರೆ ಉಡುಪು ಹಾಕಿಕೊಂಡು ಸರಿಯಾದ ಸಮಯಕ್ಕೆ ರಂಗ ಪ್ರವೇಶ ಮಾಡ್ತಾ ಇದ್ರು.
ಎಲ್ಲಿಯೂ ತಡವರಿಸದ ಮಾತುಗಳಿಗೆ ಸನ್ನಿವೇಶಕ್ಕೆ ತಕ್ಕಂತಹ ನವರಸಗಳು* ಆಯಾಸವೇ ಇಲ್ಲದೇ ಇಮ್ಮಡಿಯಾಗುತ್ತಿದ್ದ ಹುರುಪು..
ಇದೆಲ್ಲ ನಾನು ಯದಕ್ಕ ಹೇಳಿದೆ ಅಂದ್ರ ಈಗ ನಾವು ನೀವೆಲ್ಲ ಸಿನೇಮಾದ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂದೇವಿ.ಸನ್ನಿವೇಶಗಳ ಹೊಂದಾಣಿಕೆ ,ಸಂಗೀತ ಮಿಶ್ರಣ ,ಮಾತುಗಳ ಹೊಂದಾಣಿಕೆ ಅವುಗಳಿಗೆ ಹೋಲಿಸಿದರೆ ನಾಟಕದಲ್ಲಿ ಎಲ್ಲವೂ ಎಷ್ಟು ಕಾಳಜೀವಹಿಸಿ ಮಾಡ್ತಾರೆ ಅಂತ ಅನಿಸ್ತು.ಅಷ್ಟೆ ಅಲ್ಲ ಅವರು ವಾರಾಂತ್ಯ ೩ ಆಟ ಮತ್ತು ಬೇರೆ ದಿನ ೨ ಆಟ ಆಡ್ತಾರ.ನಮ್ಮ ಸಿನೆಮಾದವ್ರು ಒಂದು ಸಿನೆಮಾ ಮಾಡಿ ಮಕಾಡೆ ಮಲಗಿ ಬಿಡ್ತಾರೆ.
ನೀವು ಕೇಳಬಹುದು ಅದು ಅವರ ಕಸುಬು ಅಂತ ..ಒಪ್ತೇನಿ ..ಆದ್ರ ಖಂಡಿತ ಹೊಟ್ಟೆ ತುಂಬೋ ಅಂತಹುದು ಅಲ್ಲವೇ ಅಲ್ಲ.ಎಲ್ಲ ನೈಪುಣ್ಯತೆ,ಹೆಚ್ಚಿನ ಅನುಭವ ಮತ್ತು ಶ್ರಮ ಇದ್ದಾಗಲೂ ಸಹ.ಟಿಕೆಟ್ ದರ ೨೫ -೪೦ ರೂಪಾಯಿ ಅಬ್ಬಬ್ಬ ಅಂದ್ರೆ ಒಂದು ಆಟಕ್ಕೆ ೧೦೦ ರಿಂದ ೧೨೦ ಜನ ಪ್ರೇಕ್ಷಕರು .ಮುಂದ ನೀವ ಲೆಕ್ಕಾ ಹಾಕಿ..ಸಭಾಗ್ರಹ ಭಾಡಿಗೆ ,ಕಲಾವಿದರ ಬಾಬ್ತು ಇತರೆ ಎಲ್ಲ ಖರ್ಚು ಕಳೆದು ಎಷ್ಟು ಉಳಿಯುತ್ತೆ ಅಂತ..ಮತ್ತೆ ಅದೂ ಬರೀ ಒಂದೇ ಸಭಾಗ್ರಹದ ಆಟ.ಎಲ್ಲಾ ಕಡೆ ಪ್ರದರ್ಶನಾನೂ ಇಲ್ಲ..ಈ ದೂರದರ್ಶನ,ಅಂತರ್ಜಾಲಗಳ ನಡುವೆ ಸೊರಗುತ್ತಿರುವ ಒಂದು ಕಲೆ ಅದು ಅಂತ ಕೊರಗು.
ಆದರೆ ನಾಟಕ ನೋಡಿ ನನಗೆ ಒಂದು ತೃಪ್ತಿ ನಿಜವಾಗಲೂ ಸಿಕ್ತು .ನಕ್ಕು ನಕ್ಕು ಮನಸ್ಸು ನಿಜವಾಗಲೂ ಹಗುರ ಆತು.
ಆಮೀರ್ ಖಾನ್ ನಮಗೆ ಮಿ. ಪರ್ಫೆಕ್ಷನಿಷ್ಟ ಅಂತ ಅನಿಸ್ತಾನ ,ನನಗೂ ಅವನ ಅಭಿನಯ ಸೇರುತ್ತದೆ, ಆದ್ರೆ ಇಲ್ಲೇ ಇವರ ಮುಂದೆ ಅವನನ್ನ ನಿವಾಳಿಸಿ ಒಗೆಯಬೇಕು ಅಂತ ಅನಿಸಿತು.ಏಕೆಂದರೆ ಇವರು ಪ್ರತೀಸಲವೂ ನೇರವಾಗಿ ಸಭಿಕರ ಮುಂದೆಯೇ ಅಭಿನಯಿಸುವವರು..ಮಾತುಗಳನ್ನ ಬಾಯಿಪಾಠ ಮಾಡಿ ಬಂದು ಒದರಿ ಹೋಗಬಹುದು ಆದ್ರೆ ಭಾವನೆಗಳನ್ನ ? ಇದೆ ಕಾರಣಕ್ಕೋ ಏನೊ ಡಾ.ರಾಜಕುಮಾರ ,ಹಿಂದಿಯ ಪೃಥ್ವಿ ರಾಜಕಪೂರ್ ನಮಗೆ ಹತ್ರ ಅನಿಸುತ್ತಾರೆ.

ನಾವು ಸಣ್ಣವರು ಇದ್ದಾಗ ಹಿರಿಯರು ನಾಟಕಕ್ಕ ಹೋಗಬ್ಯಾಡ್ರಿ ಅದರ ತಲಬು ಛೊಲೊ ಅಲ್ಲ ಅಂತ ಹೇಳ್ತಿದ್ರು ..ಅದು ಯದಕ್ಕ ಅಂತ ನನಗ ಇವತ್ತಿಗೂ ತಿಳೀವಲ್ತು .ಅದರಲ್ಲೆ ಶ್ಲೇಷಾಲಂಕಾರದ ಪ್ರಯೋಗ ಭಾಳ ಅಂತನೋ ಏನೊ ?ಹಂಗ ಇದ್ರ ನಾವು ಈಗಿನ ಸಿನೇಮಾ ನೋಡ್ಲೆಬಾರದು ಏನೊ?ಅಲ್ಲೆ ಮಾತು ಕಡಿಮೆ ಇದ್ರೂ ಶೃಂಗಾರ ರಸಕ್ಕೆ ಪ್ರಧಾನ್ಯತೆ.

ನಾಟಕ ಮುಗಿದ ಮೇಲೆ ಅದರ ನಿರ್ದೇಶಕ (ಡೈರೆಕ್ಟರ್) ಅವರೂ ಒಬ್ಬ ಪಾತ್ರಧಾರಿಯೇ ,ಹಿರಿಯ ಕಲಾವಿದರು ಅವರು.ನಾಟಕ ನೋಡಲು ಬಂದಂತಹ ಎಲ್ಲರಿಗೂ ಅಭಿನಂದಿಸಿ ಪಾತ್ರಗಳ ಪರಿಚಯ ಮಾಡಿಕೊಟ್ಟರು.ಹಾಗೆಯೇ ಕೆಲ ಪಾತ್ರಗಳ ಅಭಿನಯವನ್ನು ಮೆಚ್ಚಿ ನೀಡಿದಂತಹ ಬಹುಮಾನ ರೂಪದ ಹಣವನ್ನು ಕೃತಜ್ಞತಾ ಪೂರ್ವಕವಾಗಿ ಪಡೆದರು .ಹಾಗೆಯೇ ನಾಟಕಗಳನ್ನೂ ನೋಡಿ ಕಲೆಯನ್ನು ಉಳಿಸಲು ಕಳಕಳಿಯ ವಿನಂತಿ ಮಾಡಿದರು.
ಬಹುಮಾನ ರೂಪದ ಹಣವೇನೂ ಜಾಸ್ತಿ ಇರಲಿಲ್ಲ. ನಿಮಗೆ ನಂಬಿಕೆ ಆಗಲಾರದು .೨೦,೫೦ ಅಬ್ಬಬ್ಬ ಅಂದ್ರೆ ೧೦೦ ಇತ್ತು ..!ಮತ್ತ ನೋಡ್ಲಿಕ್ಕೆ ಬರುವವರೆಲ್ಲರೂಜಾಸ್ತಿ ಜನ ಎಲ್ಲ ೨ ಅಂಕ ಮುಗಿದವರು,(ವೃಧ್ಧರು) ವೇಳೆಹರಣ ಮಾಡುವವರೇ ಇದ್ದರು.ಅಂದರೆ ಜನರಲ್ಲಿ ಎಷ್ಟು ಅಭಿರುಚಿ ಕಡಿಮೆಯಾಗಿದೆ ಅಂತ ಊಹಿಸಬಹುದು.ಅದಕ್ಕೆ ಕಾರಣ ಹತ್ತು ಹಲವು ಇರಬಹುದು.ಭಾಳ್ ಖೇದಕರ ಅಂತ ಅನಿಸಿತು.
ನೀವು ಶಾರುಖ್ ಖಾನನ ಅಭಿನಯ ಒಮ್ಮೆಯಾದರೂ ಮೆಚ್ಚಿದ್ರೆ ,ಗೋವಿಂದ-ಡೇವಿಡ್ ಧವನರ ಹಾಸ್ಯ ನೋಡಿ ನಕ್ಕಿದ್ರೆ ಒಮ್ಮೆಯಾದರೂ ನಾಟಕ ನೋಡಲೇ ಬೇಕು.ಮನರಂಜನೆ ಏನು ಅಂತ ಅರಿಯಲೇ ಬೇಕು ಅಂತ ನನ್ನ ಅಭಿಪ್ರಾಯ.ನಾಟಕ ನೋಡ್ರಿ ಏನೂ ತಪ್ಪಿಲ್ಲ.ಒಳ್ಳೆಯ ಮನರಂಜನೆ ಸಿಗುತ್ತದೆ.ಅದೂ ಒಂದು ರೀತಿಯ ಕಲೆ ಅದನ್ನು ಉಳಿಸಲು ಪ್ರಯತ್ನ ಮಾಡೋಣ.ನಾನು ಅದೇ ವಿಚಾರದಲ್ಲಿ ಅವತ್ತೇ ಮತ್ತೊಂದು ನಾಟಕದ ಸಿ.ಡಿ ತೆಗೆದುಕೊಂಡು ಬಂದೆ.ಹೆಸರು ಪಶ್ಚಾತ್ತಾಪ.. ಮಾಸ್ಟರ್ ಹಿರಣ್ಣಯ್ಯ ಅವರದು.ಒಂದು ಒಳ್ಳೆಯ ಸಾಮಾಜಿಕ ನಾಟಕ. ಇನ್ನೊಂದು ಕಳವಳ ಆಗ್ತಾ ಇದೆ ಯಕ್ಷಗಾನದ ಬಗ್ಗೆ.ಅದೂ ಸಹ ನಶಿಸಿ ಹೋಗ್ತಾ ಇದೆಯೋ ಏನೊ ಈ ಕ್ಲಬ್ ಡ್ಯಾನ್ಸ್,ಬೆಲ್ಲಿ ಡ್ಯಾನ್ಸ್ ಭರಾಟೆಯಲ್ಲಿ..ಖರೆ ಹೇಳ್ಬೇಕು ಅಂದ್ರ ನಾನು ದೂರದರ್ಶನದಲ್ಲಿ ಸಹ ಒಮ್ಮೆಯೂ ಯಕ್ಷಗಾನ ನೋಡಿಲ್ಲ…!

*ನವರಸಗಳು

ಶೃಂಗಾರ ಹಾಸ್ಯ ಕರುಣ ರೌದ್ರ ವೀರ ಭಯಾನಕ ಭೀಭತ್ಸ ಅಧ್ಭುತ ಶಾಂತಾ ಚ ನವ ನಾಟ್ಯೇ ರಸ ಸ್ಮೃತಾ:..

ಕಾಲಾಯ ತಸ್ಮೈ ನಮಃ -1

ಫೆಬ್ರವರಿ 19, 2020

ಹಲೋ..
ಎಳ್ಳು ಬೆಲ್ಲ ತೊಗೊಂಡು ಒಳ್ಳೊಳ್ಳೆ ಮಾತಾದೊನಪ್ಪ..
ಮಗನ..ನೀನೆ ಹೇಳಿದಿ ಎನಲೇ ಮದ್ಲೆಕ್ಕ
ಹಹಹಹ ಹಾ
ಎಳ್ಳು ಬೆಲ್ಲ ತೊಗೊಂಡು ಒಳ್ಳೊಳ್ಳೆ ಮಾತಾಡೊನ್ಲೆ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು..
ಲೇ ನಿಂಗೂ ಲೇ..

ಇದು ನನ್ನ ಅಗದೀ ಖಾಸ್ ಗೆಳ್ಯಾನ ಜೊತಿ ಇವತ್ತು ಆದ ಸಂಭಾಷಣೆ.ಬರೆ ಎಂಟು ಹತ್ತು ವರ್ಷದ ಹಿಂದ ನಾನು ಅವಾ ಇನ್ನೂ ಇಬ್ರು ಮೂರು ಮಂದಿ ಕೂಡಿ ಹೊಸ ಅರಬಿ ಹಾಕ್ಕೊಂಡು ನಡಕೊತ.. ಗೊತ್ತಿರೋ ಪ್ರತಿಯೊಬ್ಬರ ಮನಿಗೂ ಹೋಗಿ ಎಳ್ಳು ಬೆಲ್ಲ ಕೊಟ್ಟು,ತೊಗೊಂಡು ಬರತಿದ್ವಿ….ಒಂದು ರೀತಿ ಖುಷಿ ಇರ್ತಿತ್ತು..

ಮನ್ಯಾಗ ಗ್ರೀಟಿಂಗ್ಸ್ ಕಾರ್ಡ್ ಮಾಡ್ತಿದ್ವಿ ,ಇಲ್ಲಾ ತಗೊಂಡು ಬರತಿದ್ವಿ ಅದರೊಳಗೆ ನಾಲ್ಕಾಳು ಎಳ್ಳು ಹಾಕಿ ಎಲ್ಲ ಸಂಬಂಧಿಕರಿಗೂ ಒಂದು ವಾರ ಮೊದಲೇ ಕಳಸ್ತಿದ್ವಿ.ಅವತ್ತಿನ ದಿವ್ಸ ಸಾಲಿಗೆ ಆಫೀಸಿಗೆ ಸೂಟಿ ಇರ್ತಿತ್ತು.ಲಗೂನ ಎದ್ದು ಸ್ನಾನ ಮಾಡಿ,ದೊಡ್ಡವರಿಗೆ ನಮಸ್ಕಾರ ಮಾಡಿ ಗುಡಿಗೆ ಹೋಗ್ತಿದ್ವಿ.ಕಬ್ಬು ಇರ್ತಿದ್ವು ಮೈ ಎಲ್ಲ ಜಿಗಟ ಜಿಗಟ ಆಗೋ ಹಂಗ ತಿನ್ನೋದು.ಸಜ್ಜಿವು ಕಟಕ್ ಭಕ್ರಿ ಬೆಣ್ಣಿ ತಿಂದು ತೆಗ್ತಿದ್ವಿ..ಒಂದು ರೀತಿ ಖುಷಿ ಇರ್ತಿತ್ತು..

ಮರುದಿವಸ ಸಾಲೀಗೂ ಹೊಸ ಬಟ್ಟಿ ಹಾಕ್ಕೊಂಡು ಹೋಗ್ತಿದ್ವಿ .ಮದ್ಲೆಕ್ಕಿನ್ನು ಎರಡು ಪಿರಿಯಡ್ ಎಳ್ಳು ಕೊಡಲಿಕ್ಕೇ ಮೀಸಲು.ನಡೀತನ ಇರ್ಲಿಲ್ಲ..ಟೀಚೆರ್ಸ್ ಗೆ ಎಳ್ಳು ಕೊಟ್ಟು ಬಾಯಾಗ ಎಳ್ಳು ಹಾಕಿಶ್ಕೊಂಡು ಬರತಿದ್ವಿ..ನಮ್ಮ senior ಹುಡುಗರು ನಮ್ಮ ಕಡೆ ಭಾಳ ಇಸ್ಕೊಂಡು ನಮಗ ಸ್ವಲ್ಪ ಕೊಡ್ತಿದ್ರು..ಹುಡುಗಿಯರೂ ಹಂಗ ಮಾಡ್ತಿದ್ರು.. ಕೆಲವೊಬ್ರು ಕೊಡ್ತಾನೆ ಇರ್ಲಿಲ್ಲ ..ಆಮೇಲೆ ಕಾರಿಡಾರ್ ಮತ್ತಾ ಕ್ಲಾಸ್ ನ್ಯಾಗ ಎಳ್ಳು ತೂರಾಡೋ ಪ್ರೋಗ್ರಾಮ್ ಇರ್ತಿತ್ತು..ಒಂದು ರೀತಿ ಖುಷಿ ಇರ್ತಿತ್ತು..

ಈಗ ಯಾರದೋ ಒಂದು ಫಾರ್ವರ್ಡ್ ಮೇಲ್, ಗ್ರೂಪ್ ಮೇಲ್ ಮಾಡ್ತೇವಿ.ಅದ್ರೋಳಗೂ ಎಳ್ಳು ಬೇವು ಬೆಲ್ಲ ಎಲ್ಲಾ ಇರ್ತಾವ.. ಆ ಗ್ರೂಪ್ನ್ಯಾಗ ಯಾರು ಯಾರು ಇರ್ತಾರೋ ಅದು ನೆನಪು ಇರಂಗಿಲ್ಲ..ಅಷ್ಟೆ..ಇಲ್ಲಾ ತಣ್ಣಗೆ ಒಂದು SMS ಮಾಡ್ತೇವಿ.ಹೊರಗಿಂದ ತಂದದ್ದು ಸಿಹಿ ತಿಂದು,ಹೇ ಈ ವರ್ಷ ಹಬ್ಬ ಭಾರೀ ಆತು ಅಂದ್ರ ಮುಗೀತು ಸಂಕ್ರಮಣ..

ನಾನು ಸಂಕ್ರಾಂತಿ ಮನ್ಯಾಗ ಮಾಡದೆ ಇರೋ ಆರನೇ ವರ್ಷ ಇದು.ಇವತ್ತು ಸಂಜೀಮುಂದ ನಮ್ಮ ಅಪಾರ್ಟ್ಮೆಂಟ್ ನಲ್ಲಿ ಸಣ್ಣ ಸಣ್ಣ ಹುಡುಗರ ಗುಂಪು ಡಬ್ಬಿ ಹಿಡ್ಕೊಂಡು ಹೋಗೋದು ನೋಡಿ ಎಲ್ಲಾ ನೆನಪುಗಳು ಬಂದು ಬಂದು ಮನಸ್ಸಿಗೆ ಅಪ್ಪಳಸ್ಲಿಕತ್ತು..ಈಗ ಆ ರೀತಿ ಹುರುಪಾಗ್ಲಿ ಗೆಳೆಯರು ಆಗ್ಲಿ ಇಲ್ಲಾ ಅಂದ್ರೂ ನೆನಪ ಮಾಡ್ಕೊಂಡು ಒಂದು ರೀತಿ ಖುಷಿ ಆತು.. ಈಗ ಕಾಲ ಬದಲಾಗೇದ ನಮ್ಮ ಕಾಲ ಹಿಂಗ ಇರ್ಲಿಲ್ಲ ಅಂತ ನಮ್ಮ ಹಿರಿಯರು ಅನ್ನೋದು ಕೇಳೇವಿ..ಕಾಲ ಬದಲಾಗಿಲ್ಲ..ನಾವು ಬದಲಾಗೇವಿ.ನಮ್ಮ ಆಚರಣೆಗಳು ಬದಲಾಗಿಲ್ಲ..ನಾವು ಬದಲು ಮಾಡ್ತಾ ಇದ್ದೆವೇನೋ ಅಂತ ಅನಸ್ತು.. ಯಾರಿಗೆ ಗೊತ್ತು ಇನ್ನೂ ಹತ್ತು ವರ್ಷದ ಮ್ಯಾಲೆ ಆ ಗುಂಪಿನ ಒಬ್ಬ ಯಾರೋ ನನ್ನ ಗತೇನ ವಿಚಾರ ಮಾಡಬಹುದಲ್ಲಾ…?

ಸಣ್ಣ ಸಣ್ಣ ಖುಷಿಗಳು ..

ಫೆಬ್ರವರಿ 19, 2020

ಮುನಿಸು,ನಗು, ಅಳು, ಜಗಳ ಇವುಗಳೆಲ್ಲ ಜೀವನದ ಒಡನಾಡಿಗಳು.ಹಾಗೆಯೇ ಚಿರಸ್ಮರಣೀಯ ನೆನಪುಗಳು ಸಹ.ಕಳೆದ ಕ್ಷಣಗಳನ್ನು ನೆನಪು ಹಾಕುತ್ತ ಕುಳಿತರೆ ಕಣ್ಣಂಚಿನಲ್ಲಿ ಹನಿ ಒಡೆಯದೇ ಹೋಗದು.ಮತ್ತೆ ಮತ್ತೆ ಅನುಭವಿಸಬೇಕೆಂದರೂ ಆಗದ,ಮನದಾಳದಿಂದಲೂ ಮಾಸದ,ಎಲ್ಲರ ಜೀವನದಲ್ಲೂ ಹಾಸುಹೊಕ್ಕಾಗಿರುವ ಇವು ಸಣ್ಣ ಸಣ್ಣ ಖುಷಿಗಳು ..ಇಣುಕಿ ನೋಡಿ
ಇವೆಲ್ಲಾ ನನ್ನವು ಮಾತ್ರವಲ್ಲ..

ಅಜ್ಜ ಕದ್ದು ಮುಚ್ಚಿ ಕೊಟ್ಟ ಪೆಪ್ಪರಮಿಂಟ
ಅಜ್ಜಿ ಹೇಳುತ್ತಿದ್ದ ಕಥೆಗಳು
ಅಪ್ಪಾಜಿ ಕೊಟ್ಟ ಮೊದಲ ಬಕ್ಷೀಸು
ಡಾಕ್ಟರ್ ಚುಚ್ಚಿದ ಇಂಜೆಕ್ಷನ್ನು
ಆ ಕಹಿ ಕಹಿ ಔಷಧಿ ಸ್ಪೂನು
ಜ್ವರ ಬಂದಾಗ ತಿಂದಂತಹ ಸಪ್ಪನೆಯ ಸಾರು ಅನ್ನ..

ಸಾಲ್ಯಾಗ ಆದ ಮೊದಲ ಕಪಾಳಮೊಕ್ಷ
ಕ್ಲಾಸಿನ ಹೊರಗೆ ನಿಂತು ತೆಗೆದ ಊಠಕ ಬೈಠಕ್
ಮಗ್ಗಿ ತಪ್ಪು ತಪ್ಪು ಅಂದು ಬಯ್ಯಿಸಿಕೊಂಡದ್ದು
ಸಂಕ್ರಾಂತಿ ದಿನ ತೂರಾಡಿದ ಎಳ್ಳುಗಳು
ಶಿಕ್ಷಕರ ದಿನದ ಹಿಂದಿನ ದಿನದ ವಾತಾವರಣ
ಬರ್ತ್ ಡೇ ದಿನ ಕೊಟ್ಟ ಚಾಕೊಲೇಟು..
ಗೆಳೆಯರು ಗಿಫ್ಟ್ ಕೊಟ್ಟ ಪೆನ್ಸಿಲ್ ಮತ್ತು ರಬ್ಬರ್ರು
ಹಾಕಿಕೊಂಡ ಮೊದಲ ಉದ್ದನೆಯ ಪ್ಯಾಂಟು

ಮ್ಯಾಥ್ಸ್ ಪೇಪರ್ಗೆ ಬಿದ್ದ ಕಡಿಮೆ ಮಾರ್ಕ್ಸು
ಪ್ರಗತಿ ಪತ್ರಿಕೆ ಹೆದರಿ ಹೆದರಿ ಅಪ್ಪಾಜಿಗೆ ತೋರಿಸಿದ್ದು
ಹಿಸ್ಟರಿ ಕ್ಲಾಸ್ನ್ಯಾಗ ಹೊಡೆದ ನಿದ್ದಿ
ಪರೀಕ್ಷೆದಾಗ ಹೊಡೆದ ಕಾಪಿ
ಕಾಪಿ ಚೀಟಿ ಇಟ್ಟು ಸಿಕ್ಕ ಆ ಕ್ಷಣ

ಸಾಲಿ ಬಿಟ್ಟ ಮ್ಯಾಲಿನ ಸೈಕಲ್ ರೇಸು
ಸೂಟಿ ದಿನದ ಸ್ಪೆಷಲ್ ಕ್ಲಾಸು
ಶನಿವಾರ ಮುಂಜಾನೆಯ ಮಾಸ್ಸ್ ಡ್ರಿಲ್ಲು
ಅದಕ್ಕ ಹೋಗದ ಹೊಡೆದ ಬಂಕು
ಮಳೆ ನೀರಿನ ಕೆಂಪು ರೊಜ್ಜಿನ್ಯಾಗ ಕುಣಿದದ್ದು
ಛತ್ರಿ ತಿರಗಿಸ್ಕೊತ ನೀರು ಸಿಡಿಸಿದ್ದು
ರೇನ್ ಕೋಟ ಪಾಟೀಚೀಲದಾಗ ಇಟ್ಟು ತೊಯಿಸ್ಕೊತ ಬಂದದ್ದು

ಕ್ಲಾಸಿನ ಹುಡುಗಿ ಕೊಟ್ಟ ಫಸ್ಟ ಸ್ಮೈಲು
ಸುಖಾಸುಮ್ಮನೆ ರೇಗಿಸುತ್ತಿದ್ದ ಹುಡುಗರು
ಗುಂಪಿನಲ್ಲಿ ಹುಡುಗಿಯರಿಗೆ ಹೊಡೆದ ಸೀಟೀ
ಕಾಡಿದಾಗ ಮುನಿಸಿಕೊಂಡು ಹೋದ ಗೆಳತಿ

ಗೋಡೆ ಸ್ಟಂಪ್ ನ ಹಾಪ್ ಪಿಚ್ಚ್ ಮ್ಯಾಚು
ಲಗೋರಿ ಡಬ್ಬಾ ಡುಬ್ಬಿ ಒನ್ ಟಿಪ್ಪಾ ಕ್ಯಾಚು
ಮಳೆ ಬಿಸಿಲೆನ್ನದೆ ಆಡುತ್ತಿದ್ದ ಸೂಟಿ
ರೋಡಿನಲ್ಲೇ ಆಡಿದ ಕ್ರಿಕೆಟ್ಟು
ಒಣಗಿದ ತೆಂಗಿನ ಗರಿಯ ಬ್ಯಾಟು
ದಿನಾಲೂ ಒಡೆಯುತ್ತಿದ್ದ ಎಂ ಆರ್ ಐ ಬಾಲು

ಮಾವು,ನೇರಳೆ,ಹುಣಸೆಗೆ ಒಗೆದ ಕಲ್ಲು
ಮಾಲಕರ ಒಡೆದ ಮನೆಯ ಹೆಂಚು
ಓಡುವಾಗ ಬಿದ್ದು ಕೈಗೆ ಹಾಕಿದ ಪ್ಲಾಸ್ಟರು
ಅದರ ಮೇಲೆ ಬರೆದ ಹೆಸರುಗಳು
ಕಾಲೇಜು ಮತ್ತು ಆಫೀಸಿನ ಮೊದಲ ದಿನ

ಗಳಿಸಿದ ಮೊದಲ ಗರಿ ಗರಿ ನೋಟು
ಅಮ್ಮನಿಗೆ ಕೊಡಿಸಿದ ಮೊದಲ ಸೀರೆ
ಗೆಳೆಯರ ಜೊತೆ ಮಾಡಿದ ಪ್ರವಾಸ
ಪಾರ್ಟಿಯಲ್ಲಿನ ಮೊದಲ ಪೆಗ್ಗಿನ ರುಚಿ
ಸೇದಿದ ಮೊದಲ ಸಿಗರೇಟು
ಕೊಟ್ಟ ಮೊದಲ ಲಿಫ್ಟು
ಹಾಕಿದ ಮೊದಲ ವೋಟು

ಅಬ್ಬಬ್ಬಬ್ಬಬ್ಬಾ ಎಷ್ಟೊಂದು ಖುಷಿಗಳು..

ಕಣ್ಣೀರ್ ನ್ಯಾಗೂ ಕಾಣ್ಲಿಕತ್ತಾವ,ಹೊಡೆತಗಳಲ್ಲಿ ಅವ,ಗಿಫ್ಟಿನಲ್ಲಿ,ಲಿಫ್ಟಿನಲ್ಲಿ ಬ್ಯಾಟಿನಲ್ಲಿ ಔಷಧಿಯಲ್ಲಿ…… ನೆನಪು ಮಾಡ್ಕೋತ ಹೋದ್ರ ಹಣಮಪ್ಪನ ಬಾಲನ ಖರೆ.. ಕಳೆದು ಹೋದ ಕ್ಷಣಗಳು ಯಾವಾಗಲೂ ಒಂದು ರೀತಿಯ ಅನುಪಮ ಖುಷಿ ಕೊಡ್ತಾವ.ಇದುವೇ ಜೀವ..ಇದು ಜೀವನ..
ಸ್ವಲ್ಪ ಟೈಮ್ ಇದ್ರ ಎಲ್ಲಾ ಕಾಣಿಸ್ತಾವ ..

ಸಹನೆ 

ಫೆಬ್ರವರಿ 19, 2020

ಒಡೆದ ಗೋಡೆಗಳು

ಮುರಿದ ಮೂರುತಿಗಳು

ಕೆದಕಿದ  ಕೆತ್ತನೆಗಳು

ಭಗ್ನವಾದ ಗುಡಿಗಳು

ಆರಾಧ್ಯರೆಲ್ಲಾ ನಗ್ನರಾದರು

 

ಬಲಪೂರ್ವಕ ಪರಿವರ್ತನೆಗಳು

ಪರಿವರ್ತಿತ  ದೇವಾಲಯಗಳು

ದೇವಾಲಯದ ಸಂಪತ್ತುಗಳು

ನಮ್ಮದೆಲ್ಲವೂ ತಮ್ಮವೆಂದರು

 

ಅನಾಥನಾದ ವಿಶ್ವನಾಥ

ಸೆರೆಮನೆಯೂ ಸಿಗದ ಗೊಲ್ಲ

ವಿರಾಮ ಸಿಗದ ರಾಮ

ಪಂಡಿತರನ್ನೆಲ್ಲ ಹೊಡಿದೋಡಿಸಿದರು

 

ಅಸಹನೆಗಳನ್ನೆಲ್ಲ ಸಹಿಸಿದೆವು

ಸಹಿಸಿದರೂ ಅಸಹನೀಯರೆನಿಸಿದೆವು !!