ಸಣ್ಣ ಸಣ್ಣ ಖುಷಿಗಳು ..

ಮುನಿಸು,ನಗು, ಅಳು, ಜಗಳ ಇವುಗಳೆಲ್ಲ ಜೀವನದ ಒಡನಾಡಿಗಳು.ಹಾಗೆಯೇ ಚಿರಸ್ಮರಣೀಯ ನೆನಪುಗಳು ಸಹ.ಕಳೆದ ಕ್ಷಣಗಳನ್ನು ನೆನಪು ಹಾಕುತ್ತ ಕುಳಿತರೆ ಕಣ್ಣಂಚಿನಲ್ಲಿ ಹನಿ ಒಡೆಯದೇ ಹೋಗದು.ಮತ್ತೆ ಮತ್ತೆ ಅನುಭವಿಸಬೇಕೆಂದರೂ ಆಗದ,ಮನದಾಳದಿಂದಲೂ ಮಾಸದ,ಎಲ್ಲರ ಜೀವನದಲ್ಲೂ ಹಾಸುಹೊಕ್ಕಾಗಿರುವ ಇವು ಸಣ್ಣ ಸಣ್ಣ ಖುಷಿಗಳು ..ಇಣುಕಿ ನೋಡಿ
ಇವೆಲ್ಲಾ ನನ್ನವು ಮಾತ್ರವಲ್ಲ..

ಅಜ್ಜ ಕದ್ದು ಮುಚ್ಚಿ ಕೊಟ್ಟ ಪೆಪ್ಪರಮಿಂಟ
ಅಜ್ಜಿ ಹೇಳುತ್ತಿದ್ದ ಕಥೆಗಳು
ಅಪ್ಪಾಜಿ ಕೊಟ್ಟ ಮೊದಲ ಬಕ್ಷೀಸು
ಡಾಕ್ಟರ್ ಚುಚ್ಚಿದ ಇಂಜೆಕ್ಷನ್ನು
ಆ ಕಹಿ ಕಹಿ ಔಷಧಿ ಸ್ಪೂನು
ಜ್ವರ ಬಂದಾಗ ತಿಂದಂತಹ ಸಪ್ಪನೆಯ ಸಾರು ಅನ್ನ..

ಸಾಲ್ಯಾಗ ಆದ ಮೊದಲ ಕಪಾಳಮೊಕ್ಷ
ಕ್ಲಾಸಿನ ಹೊರಗೆ ನಿಂತು ತೆಗೆದ ಊಠಕ ಬೈಠಕ್
ಮಗ್ಗಿ ತಪ್ಪು ತಪ್ಪು ಅಂದು ಬಯ್ಯಿಸಿಕೊಂಡದ್ದು
ಸಂಕ್ರಾಂತಿ ದಿನ ತೂರಾಡಿದ ಎಳ್ಳುಗಳು
ಶಿಕ್ಷಕರ ದಿನದ ಹಿಂದಿನ ದಿನದ ವಾತಾವರಣ
ಬರ್ತ್ ಡೇ ದಿನ ಕೊಟ್ಟ ಚಾಕೊಲೇಟು..
ಗೆಳೆಯರು ಗಿಫ್ಟ್ ಕೊಟ್ಟ ಪೆನ್ಸಿಲ್ ಮತ್ತು ರಬ್ಬರ್ರು
ಹಾಕಿಕೊಂಡ ಮೊದಲ ಉದ್ದನೆಯ ಪ್ಯಾಂಟು

ಮ್ಯಾಥ್ಸ್ ಪೇಪರ್ಗೆ ಬಿದ್ದ ಕಡಿಮೆ ಮಾರ್ಕ್ಸು
ಪ್ರಗತಿ ಪತ್ರಿಕೆ ಹೆದರಿ ಹೆದರಿ ಅಪ್ಪಾಜಿಗೆ ತೋರಿಸಿದ್ದು
ಹಿಸ್ಟರಿ ಕ್ಲಾಸ್ನ್ಯಾಗ ಹೊಡೆದ ನಿದ್ದಿ
ಪರೀಕ್ಷೆದಾಗ ಹೊಡೆದ ಕಾಪಿ
ಕಾಪಿ ಚೀಟಿ ಇಟ್ಟು ಸಿಕ್ಕ ಆ ಕ್ಷಣ

ಸಾಲಿ ಬಿಟ್ಟ ಮ್ಯಾಲಿನ ಸೈಕಲ್ ರೇಸು
ಸೂಟಿ ದಿನದ ಸ್ಪೆಷಲ್ ಕ್ಲಾಸು
ಶನಿವಾರ ಮುಂಜಾನೆಯ ಮಾಸ್ಸ್ ಡ್ರಿಲ್ಲು
ಅದಕ್ಕ ಹೋಗದ ಹೊಡೆದ ಬಂಕು
ಮಳೆ ನೀರಿನ ಕೆಂಪು ರೊಜ್ಜಿನ್ಯಾಗ ಕುಣಿದದ್ದು
ಛತ್ರಿ ತಿರಗಿಸ್ಕೊತ ನೀರು ಸಿಡಿಸಿದ್ದು
ರೇನ್ ಕೋಟ ಪಾಟೀಚೀಲದಾಗ ಇಟ್ಟು ತೊಯಿಸ್ಕೊತ ಬಂದದ್ದು

ಕ್ಲಾಸಿನ ಹುಡುಗಿ ಕೊಟ್ಟ ಫಸ್ಟ ಸ್ಮೈಲು
ಸುಖಾಸುಮ್ಮನೆ ರೇಗಿಸುತ್ತಿದ್ದ ಹುಡುಗರು
ಗುಂಪಿನಲ್ಲಿ ಹುಡುಗಿಯರಿಗೆ ಹೊಡೆದ ಸೀಟೀ
ಕಾಡಿದಾಗ ಮುನಿಸಿಕೊಂಡು ಹೋದ ಗೆಳತಿ

ಗೋಡೆ ಸ್ಟಂಪ್ ನ ಹಾಪ್ ಪಿಚ್ಚ್ ಮ್ಯಾಚು
ಲಗೋರಿ ಡಬ್ಬಾ ಡುಬ್ಬಿ ಒನ್ ಟಿಪ್ಪಾ ಕ್ಯಾಚು
ಮಳೆ ಬಿಸಿಲೆನ್ನದೆ ಆಡುತ್ತಿದ್ದ ಸೂಟಿ
ರೋಡಿನಲ್ಲೇ ಆಡಿದ ಕ್ರಿಕೆಟ್ಟು
ಒಣಗಿದ ತೆಂಗಿನ ಗರಿಯ ಬ್ಯಾಟು
ದಿನಾಲೂ ಒಡೆಯುತ್ತಿದ್ದ ಎಂ ಆರ್ ಐ ಬಾಲು

ಮಾವು,ನೇರಳೆ,ಹುಣಸೆಗೆ ಒಗೆದ ಕಲ್ಲು
ಮಾಲಕರ ಒಡೆದ ಮನೆಯ ಹೆಂಚು
ಓಡುವಾಗ ಬಿದ್ದು ಕೈಗೆ ಹಾಕಿದ ಪ್ಲಾಸ್ಟರು
ಅದರ ಮೇಲೆ ಬರೆದ ಹೆಸರುಗಳು
ಕಾಲೇಜು ಮತ್ತು ಆಫೀಸಿನ ಮೊದಲ ದಿನ

ಗಳಿಸಿದ ಮೊದಲ ಗರಿ ಗರಿ ನೋಟು
ಅಮ್ಮನಿಗೆ ಕೊಡಿಸಿದ ಮೊದಲ ಸೀರೆ
ಗೆಳೆಯರ ಜೊತೆ ಮಾಡಿದ ಪ್ರವಾಸ
ಪಾರ್ಟಿಯಲ್ಲಿನ ಮೊದಲ ಪೆಗ್ಗಿನ ರುಚಿ
ಸೇದಿದ ಮೊದಲ ಸಿಗರೇಟು
ಕೊಟ್ಟ ಮೊದಲ ಲಿಫ್ಟು
ಹಾಕಿದ ಮೊದಲ ವೋಟು

ಅಬ್ಬಬ್ಬಬ್ಬಬ್ಬಾ ಎಷ್ಟೊಂದು ಖುಷಿಗಳು..

ಕಣ್ಣೀರ್ ನ್ಯಾಗೂ ಕಾಣ್ಲಿಕತ್ತಾವ,ಹೊಡೆತಗಳಲ್ಲಿ ಅವ,ಗಿಫ್ಟಿನಲ್ಲಿ,ಲಿಫ್ಟಿನಲ್ಲಿ ಬ್ಯಾಟಿನಲ್ಲಿ ಔಷಧಿಯಲ್ಲಿ…… ನೆನಪು ಮಾಡ್ಕೋತ ಹೋದ್ರ ಹಣಮಪ್ಪನ ಬಾಲನ ಖರೆ.. ಕಳೆದು ಹೋದ ಕ್ಷಣಗಳು ಯಾವಾಗಲೂ ಒಂದು ರೀತಿಯ ಅನುಪಮ ಖುಷಿ ಕೊಡ್ತಾವ.ಇದುವೇ ಜೀವ..ಇದು ಜೀವನ..
ಸ್ವಲ್ಪ ಟೈಮ್ ಇದ್ರ ಎಲ್ಲಾ ಕಾಣಿಸ್ತಾವ ..

ನಿಮ್ಮ ಟಿಪ್ಪಣಿ ಬರೆಯಿರಿ