ಮರೆವು

ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು..
ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು..ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು..
ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ..
ಹಿಂಗ ದಿನಾಲೂ ಎಷ್ಟೋ ಸರ್ತೆ ಮರೆವಿನ ಪ್ರಸಂಗಗಳನ್ನ ವ್ಯಾಖ್ಯಾನ ಮಾಡೋದನ್ನ ಕೇಳಿರ್ತೆವಿ,ಮಾಡಿರ್ತೆವಿ, ಅಲಾ.. ?
ಈ ಮರೆವು ಅನ್ನೋದು ಎನದಲಾ ಅದು ಒಂದು ರೀತಿ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿ ಬಿಟ್ಟದ.ಎಷ್ಟು ಅಂದ್ರ, ಆಧುನಿಕ
ಜಗತ್ನ್ಯಾಗ ಈ ಮರೆವನ್ನ ಗೆದ್ದವರು ಇಲ್ಲೇ ಇಲ್ಲ ಅನ್ನೋ ಅಷ್ಟು !.

ಮರೆವು ಅನ್ನೋದು ಒಂದು ಅತೀ ಪ್ರಭಾವೀ ಮತ್ತ ವಿವಿಧತೆ ಉಳ್ಳ ಒಂದು ವಿಚಾರ.
ಇದು ಮಾನವನಿಗೆ ಒಂದು ರೀತಿ ವರದಾನನೂ ಹೌದು ಮಹಶಾಪ ಅಂತನೂ ಹೇಳಬಹುದು..
ಅದ್ರೋಳಗೂ ನಾನಾ ಪ್ರಕಾರಗಳು ಪ್ರಸಂಗಗಳು ಅವ..ನಡೀರಿ ಒಂದೊಂದ ನೋಡೋಣoತ..

ಒಂದಿಷ್ಟು ಮಂದಿ ಇರ್ತಾರ,ಅವ್ರಿಗೆ ಏನು ಅಂದ್ರ ಏನೂ ನೆನಪನ್ಯಾಗ ಇರಾಂಗೆ ಇಲ್ಲ..ಓದಿದ್ದು,ಬರೆದಿದ್ದು,ಕೇಳಿದ್ದು,ಕಡೀಕ..ತಮ್ಮ
ಜೋತೀನ ಆದ ಘಟನೆನೂ ಮರ್ತು ಬಿಡ್ತಿರ್ತಾವ .ಅದರ ಸಲವಾಗಿ ಎಷ್ಟೋ ಜನ ಪ್ರಾಣಯಾಮ,ಗುಳಿಗಿ,ಚೂರ್ಣಾ ಅಥವಾ ನೆನಪು ಇಡಲು ಅನುಕೂಲ
ಆಗೋ ಅಂಥಾ ಅಭ್ಯಾಸಗಳನ್ನ ಮಾಡ್ತಿರ್ತಾರ .ಆದರೂ ಮರೀತಿರ್ತಾರ.ಇನ್ನ ಒಂದಿಷ್ಟು ಮಂದಿ ಇವನ್ನ ಮಾಡೋದೂ ಮರೀತಿರ್ತಾರ..!!
ಇವರೆಲ್ಲರೂ ಮಹಾ ಮರೆಗೂಳಿ ಗುಂಪಿಗೆ ಸೇರುವಂತಹವರು.
ಪಾಪ ,ಇಂಥವರು ಮಾನಸೀಕವಾಗಿ ಅದೆಷ್ಟು ಜರ್ಜರಿತ ಆಗಿರ್ತಾರೋ ಏನೋ.ಎಷ್ಟೊಕ್ಕೊಂದು ಕೀಳರಿಮೆ ಬೆಳಿಷ್ಕೊಂಡು ಬಿಟ್ತಿರ್ತಾರ ..

ಈ ಮುಂದಿನ ಗುಂಪಿನಾವ್ರ ಕಥೀನ ಬ್ಯಾರೆ,ಇವರದು ಹೆಂಗಪಾ ಅಂದ್ರ,ಮರೀಬೇಕು ಅಂದ್ರೂ ಆಗ್ತಿರೂದಿಲ್ಲ.ಮರೀಲೇಬೇಕು ಅಂತ ಹರಸಾಹಸ ಮಾಡ್ತಾರ,
ಜಿಗಿದ್ಯಾಡ್ತಾರ,ಗಜಂ ನಿಂದರ್ತಾರ,ಕಡೀಕ ಮರೀಬಹುದೋ ಏನೋ ಅಂತ ಅಂದ್ಕೊಂಡು ಒಂದು ಆಕರ್ಷಕ ದುಬಾರಿ ಬಾಟ್ಲ್ಯಾಗ ಬರೋ ಔಶಧಿಗೆ,ಶರಣಾಗ್ತಾರ..
ಹಾಂ ಬರೋಬ್ಬರಿ ಊಹೆ ಮಾಡಿದ್ರಿ,ಇವ್ರು ಜೀವನದಲ್ಲೇ ಅಸಫಲರಾದ್ವಿ ಅಂತ ಅಂದ್ಕೊಳ್ಳಾವ್ರು..ಮುಖ್ಯವಾಗಿ ಪ್ರೀತಿ ಮಾಡಿದವ್ರು,ಜೀವನದ ಪ್ರಮುಖ ಘಟ್ಟಗಳಲ್ಲಿ
ತಪ್ಪು ತೀರ್ಪು ತೊಗೊಂಡಾವ್ರು,ಅಗದೀ ಖಾಸ್ ಜನರನ್ನ ಶಾಶ್ವತವಾಗಿ ಕಳಕೊಂಡು ಅವರ ನೆನಪು ಮರೀಬೇಕನ್ನವ್ರು ಇತ್ಯಾದಿ ಇತ್ಯಾದಿ..
ನಾ ನಿಂಗೆ ಸಿಗಲಾssರೆ…. ಅಂತ ಮರೆವು ಇವರನ್ನ ನೋಡಿ ಹಾಡ್ಕೋತಿರ್ತದಾ..

ಇನ್ನ ಮುಂದ ಬರೋವ್ರು “ಇಚ್ಛಾ ಮರೆವಿ” ಗಳು.ಅಂದ್ರ ತಮ್ಮ ಸ್ವಂತ ಇಚ್ಛಾ ಬಲದಿಂದ ಮರೆಯುವವರು ಮತ್ತು ಒಮ್ಮಿಂದೊಮ್ಮಿಲೆ ತಮಗೆ ಬೇಕಾದಾವಾಗ
ಮರೆವಿನ ಕವಚ ಭೇದಿಸಿ ಇಣುಕು ಹಾಕಿ ಸ್ವಲ್ಪ ಅಡ್ಯಾಡಿ ಹೊಗಾವ್ರು.ಎಷ್ಟೋ ದಿವ್ಸಾ ಯಾರ ಉಸಾಬರೀಗೂ ಹೋಗ್ದನಾ, ತಮ್ಮ ಪೂರ್ತೆಕ್ಕ ತಾವಿದ್ದು,

ಜನರ ಮನಃ ಪಟಲದಿಂದ ಮರೆತವರಂತಾಗ್ಲಿಕತ್ತೆವಿ ಅಂತ ಅನಿಸಿದ್ ಕೂಡ್ಲೇನಾ, ಧಿಡಿಲ್ ಅಂತ ಕರೆ ಮಾಡಿ,ಇಲ್ಲಾ ಸಂದೇಶ ಕಳ್ಸಿ,ಅಥವಾ ಮನೀ ಒಳಗ
ಎದುರು ಬಂದು ನಿಂತು ” ಎನ್ರಿಪಾ ಮರತ್ರಿ ಏನು ನಮ್ಮನ್ನ ಅಂತ ದಬಾಯಿಸೋವ್ರು”ಇಂಥಾ ಮಂದಿ ಭಾರೀ ಕಿಲಾಡಿಗಳು.

ಇನ್ನ ಇದರ್ದಾ ಸಮಾನಾಂತರ ಹಾದಿಯೊಳಗ ಸಿಗೋ ಜನಾನೂ ಇದ್ದರ,

ಅವರು ಹೆಂಗಪಾ ಅಂದ್ರ ತಾವು ವಿದೇಶಕ್ಕ ಹೊಂಟಾಗ,ತಮ್ಮ ಮದ್ವಿ ನಿಶ್ಚಯ ಆದಾಗ,ಮಗು ಹುಟ್ಟಿದಾಗ,ಮನೀ ಕಟ್ಟಿ ಗೃಹ ಪ್ರವೇಶ ಮಾಡ್ಬೇಕಾದಾವಾಗ,
ಅಂದ್ರ ವಟ್ಟ ಖುಷಿ ಸುದ್ದಿ ಇದ್ದಾಗ ಅದನ್ನ ಹೇಳ್ಕೊಲ್ಲಿಕ್ಕೆ ಬೇಕಲ್ಲ ..ಇನ್ನ ತಾವು ಅತೀ ದು:ಖದಾಗ ಇದ್ದಾಗ,ಕಷ್ಟದಾಗ ಇದ್ದಾಗ
ಅಥವಾ ಸಹಾಯ ಬೇಕಾದವಾಗ ಅಥವಾ ಜನ ನಮ್ಮನ್ನ ನಗಣ್ಯ ಮಾಡ್ಲಿಕತ್ತಾರ ಅಂತ ಅಂದ್ಕೊಂಡು ನೆನಪು ಮಾಡ್ಕೊಳ್ಳವ್ರುದ್ದು ಮತ್ತೊಂದು ಗುಂಪು..
ಇವರನ್ನ ಸೋಗಲಾಡಿ ಮರೆವವರು ಅಂತ ಅನ್ನಬಹುದೇನೋ..

ಇಲ್ಲೇ ನಾವು ಇನ್ನೊಂದು ಗುಂಪು ಸೇರಿಸಬಹುದು,ಹೊಡ್ತ ಬಿದ್ದು,ಮಾನಸಿಕ ಆಘಾತ ಆಗಿ,ಅಥವಾ ಇನ್ಯಾದೋ ಕಾರಣಕ್ಕ ನೆನಪಿನ ಶಕ್ತಿ ಕಳ್ಕೊಂಡು
ಮರೆವಿನ ಛಾಯಾಛತ್ರದಲ್ಲಿ ಕೆಲದಿನ ಇಲ್ಲಾ ಜೀವನ ಪೂರ್ತಿ ಆಸರೆ ಪಡೆಯುವವರು.ಇದ ಗುಂಪನ್ಯಾಗನ.. ನಮ್ಮ ಘಜಿನಿ ಮತ್ತ ಹುಚ್ಚ ಇಬ್ರೂ ಬರ್ತಾರಾ..

ಇನ್ನ ಮರೆವಿನ ಪ್ರಕಾರಗಳಲ್ಲಿ ಅತೀ ಶೀಘ್ರದಲ್ಲಿ ಬೆಳೀಲಿಕತ್ತಾವ್ರು ಯಾರಪ್ಪ ಅಂದ್ರ, ಮರೆಯೋದು ಅನ್ನೋದನ್ನ ಒಂದು ರೀತಿ ಗೌರವ ಮತ್ತ ಪ್ರತಿಷ್ಥೆ ವಿಚಾರ

ಅಂತ ಅಂದ್ಕೊಂಡಾವ್ರುದ್ದು..!! ಹಾಂ ಖರೇನಾ..ಈಗೀಗ ಮರೆಯೋದು ಒಂದು ಪ್ರತಿಷ್ಥೆ ಮಾತೇ ಆಗೇದ..
ಮೊದಲನೇ ಗುಂಪಿನವರು ಇವರನ್ನ ನೋಡಿ ಅದೆಷ್ಟ್ ಸಂಕಟ ಪಡ್ತಿರ್ತಾರೋ ಏನೋ,ಪಾಪಾ..
ಒಂದಿಷ್ಟು ತಿಂಗ್ಳಾ ಮದ್ಲೆಕ್ಕ ಏನಾತಪಾ ಅಂದ್ರ ನನ್ನ ಗೆಳ್ಯಾನ ಮದ್ವಿ ಇತ್ತು,ಅದು ಮುಗದು ಒಂದು ಸ್ವಲ್ಪ ದಿವ್ಸ ಆದಮ್ಯಾಲೆ,ನನ್ನ ಗೆಳತಿ ಒಬ್ಬಾಕಿ ಸಂದೇಶ ಕಳ್ಸಿ
“ಎನಲೇ ನಾನು ಮರೀತೇನಿ ಅಂತ ಗೊತ್ತಿದ್ರೂ ನೀವು ಯಾಕ ನನಗ ಅವ್ನ ಮದ್ವಿ ಬಗ್ಗೆ ನೆನಪಿಸ್ಲಿಲ್ಲ,ನಾನು ನಿಮ್ಮ ಸಲವಾಗಿ ಮದ್ವಿ ತಪ್ಪಿಶಿಕೊಂಡೆ,
ಎಂಥಾ ಗೆಳ್ಯಾರ್ಲೇ ನೀವು” ಅಂತ ಅಂದ್ಲು ..ಅಬ್ಬಾ ಭಲೇ ಮಗಳೇ ,ಭೇಷ್ .. ಅಂದೆ..
ಹಿಂಗ ಈ ಗುಂಪನ್ಯಾಗ ಇಂಥಾ ಭಾಳಷ್ಟು ಮಂದಿ ಬರ್ತಾರ,ನಾನು ಇಲ್ಲೆ ಬರಿಯೋದ್ರಕ್ಕಿಂತಾನೂ ಹೆಚ್ಚಗೀ ನಿಮ್ಮ ಅನುಭವಕ್ಕ.. ರಗಡ ಬಂದಿರ್ತಾವ ಅಂತ ಅಂದ್ಕೊಂಡು ಬಿಡ್ಲಿಕತ್ತೆನಿ..

ಹಿಂಗ ಈ ಮರೆವು ಅನ್ನೋದು ಎನದಲಾ ಅದು ಒಂದು ರೀತಿ ಕೈಗೆ ಸಿಗದ ಮಾಯೆ, ಒಣ ಪ್ರತಿಷ್ಥೆ,ಬೆಂಬಿಡದ ಭೂತ ಅನ್ನೋ ಏನೇನೋ ಅವತರಾಗಳನ್ನ ಎತ್ತೆದ..
ಎತ್ಲಿಕತ್ತದ..ಎತ್ತಿ ಮೆರೀಲಿಕತ್ತದ.. ಇದಕ್ಕೆ ಯಾವುದೇ ಸಮಯದಲ್ಲಿಯೂ ಔಷಧೀನೆ ಇಲ್ಲಾ..ಇದು ತನ್ನ ಲೀಲೆಗಳಲ್ಲಿ ನಗೆ ಬುಗ್ಗೆ ಗಳನ್ನ ಚಿಮುಕಿಸಿದಾಗ ನಕ್ಕು,
ಅಸಮಧಾನದ ಉಗಿಕೆಂಡಗಳನ್ನ ನುಂಗಿಸಿದಾಗ ತಂಪ ನೀರು ಕುಡದು..ಮರೀಚಿಕೆಯಾಗಿ ಕಾಡಿದಾಗ,ನೆರಳಿನ ಗತೆ ಕೈಗೆ ಸಿಗದೇ ಇದ್ದಾಗ,,
ಬೆನ್ನು ಹತ್ತದೇ ಇರಲಿಕ್ಕೆ ಪ್ರಯತ್ನ ಮಾಡ್ಬೇಕಷ್ಟ..

**ಇಷ್ಟೆಲ್ಲಾ ಓದಿ ಮೆಚ್ಚುಗೆ ಸೂಚಿಸೋದನ್ನ ಮರೀಬ್ಯಾಡ್ರಿಪಾ..

ನಿಮ್ಮ ಟಿಪ್ಪಣಿ ಬರೆಯಿರಿ