ನಾನು ಮತ್ತು ನನ್ನ ಮನಸ್ಸು

ಈ ವಿಷಯದ ಬಗ್ಗೆ ಪೀಠಿಕೆ ಹಾಕೊ ಹಂತಾದ್ದು ಏನೂ ಇಲ್ಲ.ಈಗ ಬರೀಲಿಕ್ಕೆ ಹೊರಟಿದ್ದು ಅಹಂಕಾರದ ಮೂಲಪದ ನಾನು ಮತ್ತು ನಮ್ಮೆಲ್ಲರಲ್ಲಿ ಏಳುವ ವಿಚಾರಗಳ ಆಗರವಾದ ಮನಸ್ಸಿನ ಬಗ್ಗೆ.ಮನಸ್ಸನ್ನು ಭೋರ್ಗರೆಯುತ್ತಿರುವ ಸಾಗರಕ್ಕೆ ಹೋಲಿಸುವುದೇ ಸೂಕ್ತ,ಅಂಬುಧಿಯ ಅಲೆಯಂತೆ ಮನಸ್ಸು.

ಒಂದು ತಿಂಗಳ ಹಿಂದ ನನ್ನ ಮಿತ್ರನ ಮದ್ವಿಗೆ ಬೆಂಗಳೂರಿಗೆ ಹೋದಾಗ ಅಲ್ಲೆ ನಮ್ಮ ವಿನ್ಯಾ (ವಿನಯ ಹುಬ್ಳಿ ) ಒಂದು ಪ್ರಶ್ನೆ ಕೇಳಿದ.. ಲೇ ಶೀಕ್ಯಾ ನೀನು ಮತ್ತ ನಿನ್ನ ಮನಸ್ಸು ಎರಡೂ ಒಂದೇ ಎನಲೇ? ನಾ ಪಟಕ್ಕನೆ ಅಗದೀ.. ನಾನು ಮತ್ತ ನನ್ನ ಮನಸ್ಸು ಎರಡೂ ಒಂದೇ ಅಂದೆ.ಅದಕ್ಕ ಅವ ನಕ್ಕ ನಾನೂ ನಕ್ಕೆ.. ಯದಕ್ಕ ನಕ್ವಿ ಗೊತ್ತಿಲ್ಲಾ.ಆಮೇಲೆ ವಿಷಯಾಂತರ ಆತು ಮಾತುಗಳು ಎಲ್ಲೆಲ್ಲೋ ಹೋದುವು.ಆದ್ರ ಆ ಪ್ರಶ್ನೆ ನನ್ನ ತಲ್ಯಾಗ ಕುತ್ತು ಹೊರಳ್ಯಾಡ್ಲಿಕತ್ತು.ಒಂದು ಸರ್ತೆ ಹೌದು ಎರಡೂ ಒಂದೇ,ಇನ್ನೊಮ್ಮೆ ಇಲ್ಲಾ ಏರಡೂ ಬ್ಯಾರೆ ಬ್ಯಾರೆ ಅಂತ,ಮತ್ತೊಮ್ಮೆ ಕೆಲ ಸಂಧರ್ಭದಾಗ ಮಾತ್ರ ಎರಡೂ ಬ್ಯಾರೆ ಬ್ಯಾರೆ ಅನಸ್ಲಿಕತ್ತು.

ಮನಸ್ಸು ನನ್ನೊಳಗೆ ಇರ್ತದ ಅಂದ್ರ ಅದು ಬ್ಯಾರೆ ಹೆಂಗ ಆತು?ಅದು ಬ್ಯಾರೆ ಅಲ್ಲಾ ಅಂದ್ರ ನಾನು ಇಲ್ಲೇ ಕುತ್ತಿರ್ತೆನಿ ಅದು ಎಲ್ಲೆಲ್ಲೋ ಅಲೀತಿರ್ತದ್ಲ?ಅದು ಅಲೀಲಿಕತ್ತಾಗ ನನಗೆ ಭೌತಿಕ ಅಸ್ತಿತ್ವನೇ ಇರಂಗಿಲ್ಲ.ಹಂಗಾದ್ರ ಮಾನಸ್ನ್ಯಾಗ ನಾ ಇದ್ದೇನೇನು?ಮನಸ್ಸು ಹುಚ್ಚು ಕುದುರೀಗತೆ ಅದನ್ನ ನಮ್ಮ ಹಿಡಿತದಾಗ ಇಟ್ಕೊಬೇಕು ಅಂತ ಅಂತಾರಲ್ಲ ಅದೇನು?ನನ್ನೊಳಗೆ ಮನಸ್ಸು ಅದ ಏನು?ಈ ಎಲ್ಲ ವಿಚಾರಗಳು ಬಂದು ಅಲ್ಲೋಲಕಲ್ಲೋಲ ಆಗ್ಲಿಕತ್ತು.ಇವು ನಡೀಲಿಕತ್ತಿದ್ದು ಮಾನಸ್ನ್ಯಾಗ ..!ಆದ್ರ ಅದಕ್ಕ ಗೊತ್ತಿಲ್ಲಾ ನಾನು ಎಲ್ಲೆ ಇದ್ದೆನಿ?ನನ್ನೊಳಗೆ ಏನೇನು ಅವ ಅಂತ..ಈಗ ಏನು ಮಾಡೋದು ಪ್ರಶ್ನೆ ಬಿಡ್ಲಿಕ್ಕೂ ಆಗ್ವಲ್ತು,ಬರೋಬ್ಬರಿ ಉತ್ತರಾನೂ ಸಿಗವಲ್ತು.ಅಬ್ಬಬ್ಬ ದೇವರೇ ಏನು ಮಾಡೀಯೋ ಮಹರಾಯ,ಏನೇನು ಮಾಡೀಪ್ಪಾ?
ಕಡೀಕ ಒಂದು ದಾರೀಯಿಂದ ಹೋಗ್ಬೇಕು ಅಂತ ನಿರ್ಧಾರ ಮಾಡಿದೆ.ಮದ್ಲೆಕ್ಕ ನಾನು ಮತ್ತ ಮನಸ್ಸು ಎರಡೂ ಬ್ಯಾರೆ ಬ್ಯಾರೆ ಅನ್ನೋ ದಾರಿ,ಎರಡನೆದ್ದು ಎರಡೂ ಒಂದೇ ಅಂತ ಹೋಗೋದು.ಅದರಿಂದ ಉತ್ತರ ಹುಡುಕಲಿಕ್ಕೆ ಸರಳ ಆಗಬಹುದೋ ಏನೋ?ಸರಿ ಪ್ರಯಾಣ ಅಂತು ಚಾಲೂ ಮಾಡಿದೆ.

ಮದ್ಲೆಕ್ಕ ನಾನು..ನಾನು ಅಂದ್ರ ಏನು?ಮತ್ತೊಂದು ಪ್ರಶ್ನೆ ಎತ್ತು.ಉತ್ತರ ನಾನು ನಾನೇ..ಅಂದ್ರ ಒಬ್ಬ ವ್ಯಕ್ತಿ ತನ್ನನ್ನು ತಾನು ಸಂಬೋಧಿಸಲು ಬಳಸುವ ಪದ ಅಂತ ನನ್ನ ವ್ಯಾಖ್ಯೆ.ಹಂಗಾದ್ರ ಅದರೊಳಗೆ ಏನೇನು ಬರ್ತಾವ?ಪಂಚೇಂದ್ರಿಯಗಳು,ಹೃದಯ,ಮೆದುಳು ಮತ್ತು ದೇಹದ ಎಲ್ಲ ಭಾಗಗಳು.ಸರಿ..

ಇನ್ನು ಮನಸ್ಸು..ಅಂದ್ರ?ಭೌತಿಕ ಅಸ್ತಿತ್ವವಿಲ್ಲದ ಬಂಧನ ಮುಕ್ತವಾಗಿ ವಿಹರಿಸುವ ನಿರ್ದಿಷ್ಟ ಗುರಿ ಗತಿ ಇಲ್ಲದ ಒಂದು ಸ್ಥಿತಿ.ಇದು ನಮ್ಮ ಮೆದುಳಿನಲ್ಲಿ ನಡೆಯುವ ಒಂದು ಅಗೋಚರ ಕ್ರಿಯೆ.

ಇಷ್ಟೆಲ್ಲಾ ಆದಮ್ಯಾಲೆ ಸ್ಪಲ್ಪ ಸ್ಪಷ್ಟ ಆಗ್ಲಿಕತ್ತು.ನನ್ನಲ್ಲಿ ಮೆದುಳು ಅದ,ಮನಸ್ಸು ಮೆದುಳಿನಲ್ಲಿ ನಡೆಯುವ ಒಂದು ಅಗೋಚರ ಕ್ರಿಯೆ ಅದಕ್ಕೆ.. ನಾನು ಮತ್ತ ಮನಸ್ಸು ಎರಡೂ ಒಂದೇ.ಒಂದು ಸರಳ ಸಮೀಕರಣ ಮಾಡಿ ಸೂತ್ರ ಕಂಡು ಹಿಡಿದ ಖುಷಿ ಏನೋ ಆತು,ಆದ್ರ ಉತ್ತರದಲ್ಲಿ ಏನೋ ಒಂಥರಾ ಅಪೂರ್ಣತೆ ಕಾಣ್ಲಿಕತ್ತು.ಮನಸ್ಸು ನನ್ನ ಜೊತೆಗೆ ಇದ್ದರೂ ಕೂಡ ಅದು ಒಂದು ಸ್ವತಂತ್ರ ಶಕ್ತಿ ಅಂತ ಭಾವನೆ.ಅದರ ಕಾರ್ಯವ್ಯಾಪ್ತೀನೇ ಬ್ಯಾರೆ.ಅದು ಊಹಾತೀತ.ಅದು ನನ್ನನ್ನು ನಡೆಸುತ್ತಿರುವ ಒಂದು ಶಕ್ತಿ.ಒಮ್ಮೊಮ್ಮೆ ಅದರ ವೇಗ ಸಾಮಾನ್ಯ ಮತ್ತು ಸರಾಸರಿಗಿಂತ ಭಾಳ ಭಾಳ ಜಾಸ್ತಿ ಆಗ್ತದ.ಕೆಲವೊಮ್ಮೆ ಸಾಮಾನ್ಯಕ್ಕಿಂತ ಕೆಳಗಡೆ ಇರ್ತದ.ಅದರ ವಿಚಾರಗಳು ಸಮುದ್ರದಲ್ಲಿ ಏಳುವ ಅಲೆಗಳಂತೆ ನಿದ್ರೂದನ ಇಲ್ಲಾ,ಹೆಚ್ಗಿ ಕಮ್ಮಿ ಆಕ್ಕೊತನ ಇರ್ತಾವ.ನಿಂತಾಗ ಕುತ್ತಾಗ ಕಡೀಕ ಮಲ್ಕೊಂಡಾಗ ಸಹ.ಇದೇ ಕಾರಣಕ್ಕೆ ಮನಸ್ಸು ನನಗಿಂತ ಬ್ಯಾರೆ ಅನಸ್ತದ.ಅನಸ್ತದ ಅಷ್ಟ ಆದರೆ ಇಲ್ಲಾ.ಅದಕ್ಕೇ ಎಲ್ಲೆಲ್ಲೋ ಹೋಗುವ ಮನಸ್ಸಿಗೆ ಕಡಿವಾಣ ಹಾಕಿ ಅದನ್ನ ಹಿಡಿತದಲ್ಲಿ ಇಟ್ಕೋಬೇಕು ಅನ್ನೋದು ಅದರಿಂದನ ನಾನು ಮತ್ತ ಮನಸ್ಸು ಒಂದ ಆಗ್ತಾವ.

ಆದರೂ ಮನಸ್ಸು ಒಂದು ಗೊಂದಲಮಯವಾದ ಆಳಕ್ಕೆ ಹೋದಷ್ಟೂ ಅನಂತ ಪ್ರಶ್ನೆಗಳನ್ನು ಗರಿಗೆದರಿಸುವ ವಿಷಯ.ಆದರೂ ಇಲ್ಲೆ ತಕ್ಕ ಪೂರ್ತೆಕ್ಕ ಒಂದು ಸಮಾಧಾನಕರ ಉತ್ತರ ಕಂಡುಕೊಂಡೇನಿ ಅಂತ ಭಾವನೆ.ನನಗೆ ಅನಿಸಿದ್ದನ್ನ ನಿರ್ದಿಷ್ಟವಾಗಿ ಪ್ರಸ್ತಾಪಿಸೇನಿ.ಮುಕ್ತವಾದ ಮನಸ್ಸಿನಿಂದ ನಿಮ್ಮ ಅನಿಸಿಕೆಗಳನ್ನ ಸೇರಸ್ರಿ.

ನಿಮ್ಮ ಟಿಪ್ಪಣಿ ಬರೆಯಿರಿ